ಬೆಂಗಾಲ್ ಟೈಗರ್ ಇದ್ದ ಬೋನಿನೊಳಗೆ ಅಕ್ರಮವಾಗಿ ಪ್ರವೇಶಿಸಿದ ಮಹಿಳೆ..! ಮುಂದೇನಾಯ್ತು..? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಬೃಹತ್ ಗಾತ್ರದ ಭಾರತೀಯ ಬೆಂಗಾಲ್ ಟೈಗರ್ ಇದ್ದ ಬೋನಿನೊಳಗೆ ಮಹಿಳೆಯೊಬ್ಬರು ಅಕ್ರಮ ಪ್ರವೇಶ ಮಾಡಿ ಪ್ರಾಣಾಪಾಯದಿಂದ ಪಾರಾದ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ನ್ಯೂಜೆರ್ಸಿಯ ಕೊಹನ್‌ಜಿಕ್ ಮೃಗಾಲಯಕ್ಕೆ ಭೇಟಿ ನೀಡಿದ್ದ ಮಹಿಳೆ ನೋಡ ನೋಡುತ್ತಲೇ ಬೇಲಿ ಹಾರಿ ಬಂಗಾಳ ಹುಲಿ (Bengal Tiger) ಆವರಣದೊಳಗೆ ಹೋಗಿದ್ದಾರೆ. ಈ ವೇಳೆ ಮಹಿಳೆ ಬೃಹತ್ ಗಾತ್ರದ ಹುಲಿಯನ್ನು ಮುಟ್ಟಲು ಪ್ರಯತ್ನಿಸಿದ್ದು, ಹುಲಿ ಆಕೆಯನ್ನು ಇನ್ನೇನು ಹಿಡಿದೇ ಬಿಟ್ಟಿತು ಎನ್ನುವಷ್ಟರಲ್ಲಿ ಅಲ್ಲಿನ ಸಿಬ್ಬಂದಿ ಜೋರಾಗಿ ಕೂಗಿದ್ದಾರೆ. ಈ ವೇಳೆ ಎಚ್ಚೆತ್ತ ಮಹಿಳೆ ಮತ್ತೆ ಹಿಂದಕ್ಕೆ ಹೋಗಿ ಹುಲಿ ಇದ್ದ ತಂತಿ ಬೇಲಿಯಿಂದ ಹಾರಿ ಹೊರಗೆ ಬಂದಿದ್ದಾಳೆ. ಈ ಭಾರತೀಯ ಹುಲಿ ಸುಮಾರು 500 ಪೌಂಡ್ ತೂಕ ಹೊಂದಿದ್ದು, ಎಂತಹ ದೈತ್ಯ ದೇಹಿಯನ್ನಾದರೂ ಕ್ಷಣಾರ್ಧದಲ್ಲಿ ಮುಗಿಸಿಬಿಡುವ ತಾಕತ್ತು ಹೊಂದಿದೆ ಎಂದು ಹೇಳಲಾಗಿದೆ. ನ್ಯೂಜೆರ್ಸಿಯ ಕೊಹನ್‌ಜಿಕ್ ಮೃಗಾಲಯದಲ್ಲಿ ರಿಷಿ ಮತ್ತು ಮಹೇಶ ಎಂಬ 2 ಬೆಂಗಾಲ್ ಟೈಗರ್ ಗಳಿದ್ದು, 2016ರಲ್ಲಿ ಇವು ಮರಿಗಳಾಗಿದ್ದಾಗ ಭಾರತದಿಂದ ಮೃಗಾಲಯಕ್ಕೆ ತರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಸ್ಥಳೀಯ ರಕ್ಷಣಾ ಸಿಬ್ಬಂದಿ ಮೃಗಾಲಯದಲ್ಲಿ ಯಾವುದೇ ಕಾರಣಕ್ಕೂ ಫೆನ್ಸಿಂಗ್ ದಾಟಿ ಮುಂದೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ನಿಯಮ ಮೀರಿ ದಾಟಿ ಹೋದರೆ ಅಂತಹವರನ್ನು ಕಾನೂನಾತ್ಮಕವಾಗಿ ಶಿಕ್ಷಿಸಲಾಗುತ್ತದೆ ಮತ್ತು ಮೃಗಾಲಯ ಪ್ರವೇಶಿಸದಂತೆ ಜೀವನಪರ್ಯಂತ ನಿಷೇಧ ಹೇರಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ. Click