ನ್ಯೂಸ್ನಾಟೌಟ್: ಅಯೋಧ್ಯೆ ರಾಮ ಜನ್ಮಭೂಮಿಗೆ ವಿಮಾನಯಾನ ಕಲ್ಪಿಸಿದ ಬಳಿಕ ಸಾವಿರಾರು ಭಕ್ತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇತ್ತೀಚೆಗೆ ಆಯೋಧ್ಯೆಗೆ ಬಂದಿಳಿದ ವಿಮಾನವೊಂದರ ಗಗನಸಖಿಯೊಬ್ಬರು ವಿಮಾನ ಅಯೋಧ್ಯೆ ತಲುಪುತ್ತಲೇ, ಕೆಳಗೆ ಇಳಿದು ನೆಲಕ್ಕೆ ನಮಸ್ಕಾರ ಮಾಡಿದ್ದಾರೆ. ರಾಮನ ಕಾರಣಕ್ಕಾಗಿ ಅಯೋಧ್ಯೆ ಪುಣ್ಯಭೂಮಿ ಎಂದು ಅವರು ಭಕ್ತಿ ಪ್ರದರ್ಶಿಸಿದ್ದಾರೆ. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಪರ-ವಿರೋಧ ಚರ್ಚೆ ಆರಂಭವಾಗಿದೆ.
ಇಂಡಿಗೋ ವಿಮಾನದಲ್ಲಿ ಗಗನಸಖಿಯಾಗಿರುವ ಆಕಾಂಕ್ಷಾ ಪಾರ್ಮರ್ ಅವರು ವಿಮಾನ ಇಳಿಯುತ್ತಲೇ ಡಾಂಬರ್ ಇದ್ದರೂ ಭೂಮಿಗೆ ನಮಸ್ಕಾರ ಮಾಡಿದ್ದಾರೆ. ಇದಾದ ಬಳಿಕ ರಾಮಮಂದಿರದ ಕಡೆ ಮುಖ ಮಾಡಿ ನಮಸ್ಕಾರ ಮಾಡಿದ್ದಾರೆ. ಈ ವಿಡಿಯೊವನ್ನು ಅವರೇ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಅಯೋಧ್ಯೆಯ ಭೂಮಿಗೆ ನಮಸ್ಕಾರ ಮಾಡುವುದು ಹೆಮ್ಮೆ ಅನಿಸುತ್ತಿದೆ. ಹಿಂದು ಆಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಜೈ ಶ್ರೀರಾಮ್” ಎಂಬುದಾಗಿ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಈ ವಿಡಿಯೋ ಭಾರಿ ವೈರಲ್ ಆಗಿದೆ. ಗಗನಸಖಿಯ ಭಕ್ತಿಗೆ ಹಲವಾರು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಕೆಲವರು, “ಇದೆಲ್ಲ ಗಿಮಿಕ್, ರೀಲ್ಸ್ಗಾಗಿ ಇಂತಹ ವಿಡಿಯೊ ಮಾಡುತ್ತಾರೆ, ಮೊದಲೇ ಪ್ಲಾನ್ ಮಾಡಿ, ರೆಕಾರ್ಡ್ ಮಾಡಿದ ವಿಡಿಯೊ ಇದು, ಅಷ್ಟೊಂದು ಭಕ್ತಿ ಇದ್ದರೆ ದೇವಾಲಯಕ್ಕೆ ಹೋಗಲಿ, ಗಗನಸಖಿಯಾದವರು ಹೇಗೆ ವರ್ತಿಸಬೇಕು ಎಂಬುದು ಮೊದಲು ಗೊತ್ತಿರಬೇಕು” ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.