ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕಿರುವ ಅಗತ್ಯತೆ ಇದೆ. ಪೋಷಕರು ಮಾಡುವ ತಪ್ಪುಗಳು ಕೆಲವು ಸಲ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಹೀಗಾಗಿ ಪೋಷಕರು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕಿದೆ. ಆ ಕ್ರಮಗಳ ಬಗ್ಗೆ ಕೆವಿಜಿ ವೈದ್ಯರಾಗಿರುವ ಡಾ| ಸುಧಾ ರುದ್ರಪ್ಪ , ಪ್ರೊಫೆಸರ್ ಡಿಪಾರ್ಟ್ ಮೆಂಟ್ ಆಫ್ ಪಿಡಿಯಾಟ್ರಿಕ್ಸ್ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರು ಅಂಕಣ ಬರೆದಿದ್ದಾರೆ. ಇದರ ಪೂರ್ಣ ಪಾಠ ಇಲ್ಲಿದೆ ಓದಿ.
ಅತಿಸಾರ ಉಂಟಾದಾಗ ನಿರ್ಜಲೀಕರಣಕ್ಕೆ ಚಿಕಿತ್ಸೆ ನೀಡಲು ಕೈಗೆಟುಕುವ ಆರೋಗ್ಯ ವಿಧಾನವೆಂದರೆ ORS ಇದರ ಪ್ರಾಮುಖ್ಯತೆಯನ್ನು ಒತ್ತಿ ಹೇಳಲು ಪ್ರತಿ ವರ್ಷ ಜುಲೈ 29 ರಂದು ವಿಶ್ವ ORS ದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ಜುಲೈ ೨೯ ರಂದು ವಿಶ್ವ ಓ ಆರ್ ಎಸ್ ದಿನವಾನ್ನಾಗಿ ಆಚರಿಸಲಾಗುತ್ತಿದೆ. ಅತಿಸಾರದಲ್ಲಿ ನಿರ್ಜಲೀಕರಣಕ್ಕೆ ಚಿಕಿತ್ಸೆ ನೀಡಲು ಆರೋಗ್ಯ ವಿಧಾನವಾಗಿ ORSನ್ನು ಬಳಸಲಾಗುತ್ತಿದೆ ಹಾಗೂ ಇದರ ಪ್ರಾಮುಖ್ಯತೆಯನ್ನು ಸಾರಲು ವಿಶೇಷವಾಗಿ ಈ ದಿನವನ್ನು ಆಚರಿಸಲಾಗುವುದು.
ಭಾರತೀಯ ಶಿಶುವೈದ್ಯರಾದ ಡಾ | ದಿಲೀಪ್ ಮಹಲ್ನಬಿಸ್ ಅತಿಸಾರದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ORS ಬಳಕೆಯನ್ನ ಪ್ರಾರಂಭಿಸಿದರು. ಸರಳವಾದ, ಅಗ್ಗದ ಓರಲ್ ರೀಹೈಡ್ರೇಶನ್ ಸೊಲ್ಯೂಷನ್ (ORS) ಪ್ರಾಮುಖ್ಯತೆ ಪಡೆಯಿತು. ತದ ನಂತರ 20 ನೇ ಶತಮಾನದಲ್ಲಿ ಪ್ರಮುಖ ವೈದ್ಯಕೀಯ ಪ್ರಗತಿಗಳಲ್ಲಿ ಒಂದೆಂದು ಪ್ರಶಂಸಿಸಲಾಯಿತು. 2001 ರಲ್ಲಿ, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ORS ದಿನವನ್ನು ಸ್ಥಾಪಿಸಿತು, ಇದನ್ನು ಜುಲೈ 29 ರಂದು ದೇಶಾದ್ಯಂತ ಆಚರಿಸಲಾಗುತ್ತದೆ.
ಅತಿಸಾರವು ಭಾರತದಲ್ಲಿ ಮಕ್ಕಳ ಮರಣದ ಮೂರನೇ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, 2021 ರಲ್ಲಿ ಪ್ರಪಂಚದಾದ್ಯಂತ ಶೇಕಡಾ 7.3% ರಷ್ಟು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವುಗಳಿಗೆ ಅತಿಸಾರವು ಒಂದು ಪ್ರಮುಖ ಕಾರಣವಾಗಿತ್ತು.
ಮಗುವಿನ ವಯಸ್ಸು ಮತ್ತು ಅಹಾರ ಪದ್ದತಿಯ ಮೇಲೆ ಒಂದು ದಿನದಲ್ಲಿ ದಿನನಿತ್ಯದ ಮಲ ವಿಸರ್ಜನೆಯ ಸಂಖ್ಯೆಯು ಭಿನ್ನವಾಗಿರುತ್ತದೆ. ಚಿಕ್ಕ ಮಕ್ಕಳು ಹೆಚ್ಚು ಬಾರಿ ಮಲವಿಸರ್ಜನೆ ಮಾಡುತ್ತಾರೆ. ಅತಿಸಾರ ಎಂದರೆ ಮಗು ತನ್ನ ದಿನನಿತ್ಯದ ಮಲವಿಸರ್ಜನೆಗಿಂತ ಹೆಚ್ಚು ಬಾರಿ ವಿಸರ್ಜಿಸಿದಾಗ ಹಾಗೂ ಮಲದ ಸ್ಥಿರತೆ ಮತ್ತು ಆವರ್ತನವು ಮಗು ಸಾಮಾನ್ಯವಾಗಿ ವಿಸರ್ಜಿಸುವುದಕ್ಕಿಂತ ಭಿನ್ನವಾದಾಗ ಅತಿಸಾರವೆಂದು ಗುರುತಿಸಲಾಗುತ್ತದೆ.
ಅನೇಕ ಕಾರಣಗಳಿಂದ ಅತಿಸಾರ ಸಂಭವಿಸಬಹುದು. ಮಕ್ಕಳಲ್ಲಿ ಅತಿಸಾರದ ಸಾಮಾನ್ಯ ಕಾರಣವೆಂದರೆ ಕರುಳಿನ ವೈರಲ್ ಸೋಂಕು. ವಿಶೇಷವಾಗಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ, ರೋಟವೈರಸ್ ಅತಿಸಾರವನ್ನು ಉಂಟುಮಾಡಲು ಕಾರಣವಾದ ಒಂದು ಪ್ರಮುಖ ವೈರಸ್ ಆಗಿದೆ. ಇತರ ಕಾರಣಗಳಾದ ವಿಬ್ರಿಯೊ ಕಾಲರಾ, ಶಿಗೆಲ್ಲ ಅಥವಾ ಶಿಲೀಂಧ್ರ ಅಥವಾ ಪರಾವಲಂಬಿ ಸೋಂಕುಗಳು, ಪ್ರತಿಕೂಲ ಔಷಧ ಪ್ರತಿಕ್ರಿಯೆಗಳು(ಡ್ರಗ್ ರಿಯಾಕ್ಷನ್), ಅಲರ್ಜಿ ಅಥವಾ ಕೆಲವು ಆಹಾರಗಳ ಸೈರಿಸದಿರುವಿಕೆ ಮತ್ತು ಕರುಳಿನ ಅಸ್ವಸ್ಥತೆಗಳಂತಹ ಬ್ಯಾಕ್ಟೀರಿಯಾ ಆಗಿರಬಹುದು.
- ಮೂತ್ರದ ಪ್ರಮಾಣ ಕಡಿಮೆಯಾಗುವುದು.
- ತುಂಬಾ ಬಾಯಾರಿಕೆ ಅಥವಾ ಅವಿಶ್ರಾಂತಿ ಭಾವನೆ
- ಹೆಚ್ಚು ಅನಾರೋಗ್ಯವಂತರ ಹಾಗೆ ತೋರುವುದು
- ವಾಂತಿ ಮಾಡುವುದು
- ಮಲದಲ್ಲಿ ರಕ್ತ
- ಕುಡಿಯಲು ಅಥವಾ ಹಾಲುಣಿಸಲು ಅಸಮರ್ಥತೆ
- ಕೈ ಕಾಲು ಅಥವಾ ಪಾದ ಹೆಚ್ಚು ತಣ್ಣಗಾಗುವಿಕೆ
- ಪ್ರತಿಕ್ರಿಯೆಯಲ್ಲಿ ಬದಲಾವಣೆ (ನಿದ್ರೆ ಅಥವಾ ಆಲಸ್ಯ)
- ಮೇಲಿನ ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣದ ವೈದ್ಯಕೀಯ ಆರೈಕೆ ಪಡೆಯಬೇಕು
- ಎಚ್ಚರಿಕೆ ಚಿಹ್ನೆಗಳು / ಅಪಾಯದ ಚಿಹ್ನೆಗಳು
- ಒಣ ಚರ್ಮ
- ಮೂತ್ರ ಪ್ರಮಾಣ ಕಡಿಮೆಯಾಗುವಿಕೆ
- ಎದೆ ಬಡಿತ ಹೆಚ್ಚಾಗುವಿಕೆ
- ಉಸಿರಾಟದ ದರ ಹೆಚ್ಚಾಗುವಿಕೆ
- ನೆತ್ತಿಬಾಯಿಯಲ್ಲಿ ವ್ಯತ್ಯಾಸ
ನಿರ್ಜಲೀಕರಣದ ಯಾವುದೇ ಲಕ್ಷಣಗಳು ಕಾಣಿಸಿಕೊಂಡಲ್ಲಿ ಹಾಗೂ ಅತಿಸಾರದ ನಿರ್ವಹಣೆಯಲ್ಲಿ ORS ಚಿಕಿತ್ಸೆಯು ಮೊದಲ ಮಾರ್ಗವಾಗಿದೆ.ವಿವಿಧ ORS ಸಿದ್ಧತೆಗಳು ಸ್ಟಾಂಡರ್ಡ್ ORS, ಲೋ ಆಸ್ಮೋಲಾರಿಟಿ ORS, ಅಕ್ಕಿಯನ್ನು ಆಧರಿಸಿದ ಅಥವಾ ತಯಾರಿಸಬಹುದಾದ ORS, ಮನೆಯಲ್ಲಿ ತಯಾರಿಸಬಹುದಾದ ORS, ಮನೆಯಲ್ಲಿ ತಯಾರಿಸಬಹುದಾದ ಸೂಪರ್ ORS, ಗುಣಮಟ್ಟದ ಸಂಯೋಜನೆ ಮತ್ತು ಪ್ರಸ್ತುತ WHO/IAP/GOI , ಶಿಫಾರಸು ಮಾಡಲಾದ ಕಡಿಮೆ ಆಸ್ಮೋಲಾರಿಟಿ ORS
ORS ಎಂದರೆ ನೀರಿನಲ್ಲಿ ಬೆರೆಸಲಾದ ಉಪ್ಪು ಮತ್ತು ಸಕ್ಕರೆಯ ಮಿಶ್ರಣ. ವಾಣಿಜ್ಯಿಕವಾಗಿ ಲಭ್ಯವಿರುವ ORS, ಲವಣಗಳು ಅಥವಾ ದ್ರಾವಣದ ರೂಪದಲ್ಲಿರುತ್ತದೆ.
ವಾಣಿಜ್ಯಿಕವಾಗಿ ಲಭ್ಯವಿರುವ ORS ಅನ್ನು ಶಿಫಾರಸು ಮಾಡಲಾದ ನೀರಿನಲ್ಲಿ (1 ಲೀ ಅಥವಾ 200 ಮಿಲಿ) ಒಂದು ಸ್ಯಾಚೆಟ್ ಅನ್ನು ಸೇರಿಸುವ ಮೂಲಕ ಸುಲಭವಾಗಿ ತಯಾರಿಸಬಹುದು.
ವಾಣಿಜ್ಯಿಕವಾಗಿ ಲಭ್ಯವಿರುವ ORS ಲಭ್ಯವಿಲ್ಲದಿದ್ದರೆ, ಅದನ್ನು ಮನೆಯಲ್ಲಿಯೇ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಸುಲಭವಾಗಿ ತಯಾರಿಸಬಹುದು
- ಕೈಗಳನ್ನು ಚೆನ್ನಾಗಿ ತೊಳೆಯಿರಿ
- ಒಂದು ಶುದ್ಧವಾದ ಲೋಟ
- ಒಂದು ಲೀಟರ್ ಕುದಿಸಿ ಆರಿಸಿದ ನೀರು
- ಆರು ಟೀ ಚಮಚ ಸಕ್ಕರೆಯನ್ನು ಸೇರಿಸಿ.
- ಅರ್ಧ ಟೀ ಚಮಚ ಉಪ್ಪು ಸೇರಿಸಿ.
- ಎಲ್ಲಾ ಪದಾರ್ಥಗಳು ಕರಗುವ ತನಕ ಚೆನ್ನಾಗಿ ಬೆರೆಸಿ ಮತ್ತು 24 ಗಂಟೆಗಳ ಒಳಗೆ ಸೇವಿಸಿ.
1980 ರ ದಶಕದ ಆರಂಭದಲ್ಲಿ “ಓರಲ್ ರೀಹೈಡ್ರೇಶನ್ ಥೆರಪಿ” ಎಂದರೆ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು UNICEF ಸೂಚಿಸಿದ ಸಿದ್ಧತೆ ಮಾತ್ರ ಆಗಿತ್ತು. 1988 ರಲ್ಲಿ, ಶಿಫಾರಸು ಮಾಡಿದ ಮನೆಯಲ್ಲಿಯೇ ತಯಾರಿಸಿದ ಪದಾರ್ಥಗಳನ್ನು ಸೇರಿಸಲು ವ್ಯಾಖ್ಯಾನವನ್ನು ಬದಲಾಯಿಸಲಾಯಿತು, ಏಕೆಂದರೆ ಅಧಿಕೃತ ಸಿದ್ಧತೆ ಯಾವಾಗಲೂ ಲಭ್ಯವಿರುವುದಿಲ್ಲ. 1988 ರಲ್ಲಿ ಈ ವ್ಯಾಖ್ಯಾನವನ್ನು ಸಹ ತಿದ್ದುಪಡಿ ಮಾಡಲಾಗಿದ್ದು, ಇದರಲ್ಲಿ ORS ಜೊತೆಗೆ ಸಹಜ ಆಹಾರ ಪದ್ಧತಿಯನ್ನು ಮುಂದುವರೆಸುವುದು ಎಂದು ಶಿಫಾರಸು ಮಾಡಿತು.
ಮನೆಯಲ್ಲಿಯೇ ತಯಾರಿಸಿದ ORS ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬಲ್ಲದು. ಅವುಗಳೆಂದರೆ
- ಎದೆಹಾಲು ಉಣಿಸುವುದು
- ಮನೆಯಲ್ಲಿ ತಯಾರಿಸಿದ ಗಂಜಿ
- ಬೇಳೆಯಿಂದ ತಯಾರಿಸಿದ ನೀರು
- ತೆಂಗಿನಾಕಾಯಿ ನೀರು
- ಮಜ್ಜಿಗೆ
- ತರಕಾರಿಯಿಂದ ತಯಾರಿಸಿದ ಸೂಪ್
- ORS ಅನ್ನು ಹೇಗೆ ನಿರ್ವಹಿಸುವುದು
ORS ದ್ರಾವಣವನ್ನು ನಿಧಾನವಾಗಿ ಚಮಚದೊಂದಿಗೆ ಅಥವಾ ಸಣ್ಣ ಸಣ್ಣ ಸಿಪ್ ನಂತೆ ನೀಡಬೇಕು. ಒಂದುವೇಳೆ ORS ಕುಡಿಯುವ ಸಂದರ್ಭದಲ್ಲಿ ಮಗು ವಾಂತಿ ಮಾಡಿಕೊಂಡಲ್ಲಿ 10 ನಿಮಿಷಗಳ ಬಳಿಕ ಇನ್ನೂ ನಿಧಾನವಾಗಿ ಅಂದರೆ 2 ನಿಮಿಷಗಳ ಅಂತರದಲ್ಲಿ ಒಂದೊಂದು ಚಮಚ ನೀಡುತ್ತಾ ಬನ್ನಿ. ಒಂದು ಸಲ ತಯಾರಿಸಿದ ORS ನ್ನು 24 ಗಂಟೆಯ ಒಳಗಾಗಿ ನೀಡಬೇಕು. ಹಾಗೂ 24 ಗಂಟೆ ಕಳೆದ ಬಳಿಕ ಉಪಯೋಗಿಸಬೇಡಿ ಚೆಲ್ಲಿ. ಅವಶ್ಯಕತೆ ಇದ್ದಲ್ಲಿ ಪುನಃ ತಯಾರಿಸಿಕೊಂಡು ತಾಜಾ ORS ನ್ನು ನೀಡತಕ್ಕದ್ದು. ORS ಅತಿಸಾರವನ್ನು ಗುಣಪಡಿಸುವುದಿಲ್ಲ ಎಂಬುದನ್ನು ಗಮನಿಸಬೇಕಾದ ಅಂಶ, ಇದು ಸಾಮಾನ್ಯವಾಗಿ ಹೆಚ್ಚಿನ ಸಂದರ್ಭಗಳಲ್ಲಿ 3-7 ದಿನಗಳಲ್ಲಿ ತನ್ನದೇ ಆದ ರೀತಿಯಲ್ಲಿ ಪರಿಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಆದಾಗ್ಯೂ, ಇದರ ಮುಖ್ಯ ಉದ್ದೇಶವೇನೆಂದರೆ ಇದು ನಿರ್ಜಲೀಕರಣವನ್ನು ತಡೆಗಟ್ಟುತ್ತದೆ ಮತ್ತು ಚಿಕಿತ್ಸೆ ನೀಡುತ್ತದೆ.
ORS ಹೊರತುಪಡಿಸಿ, ಅತಿಸಾರಕ್ಕೆ ಶಿಫಾರಸು ಮಾಡಲಾದ ಔಷಧಿಯೆಂದರೆ ಝಿಂಕ್. ಇದನ್ನು 6 ತಿಂಗಳಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ಒಟ್ಟು 14 ದಿನಗಳವರೆಗೆ ದಿನಕ್ಕೆ 20 ಮಿಗ್ರಾಂ ನೀಡಲಾಗುತ್ತದೆ. 2-6 ತಿಂಗಳ ವಯಸ್ಸಿನ ಮಕ್ಕಳಿಗೆ, 14 ದಿನಗಳವರೆಗೆ ದಿನಕ್ಕೆ 10 ಮಿಗ್ರಾಂ ನೀಡಬೇಕಾಗುತ್ತದೆ. ಇದು ಅತಿಸಾರದ ಅವಧಿ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಂದಿನ 3 ತಿಂಗಳವರೆಗೆ ಅತಿಸಾರದ ಪುನಾರಾವರ್ತನೆಯನ್ನು ತಡೆಯಲು ಇದು ಸಹಕಾರಿಯಾಗಿದೆ
- ಕೈಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು
- ಚೆನ್ನಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು
- ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು
- ಆಹಾರದ ಮೊದಲು ಕೈಗಳನ್ನು ತೊಳೆಯುವುದು
- ವ್ಯಾಕ್ಸಿನೇಷನ್
ಆದ್ದರಿಂದ ಮಕ್ಕಳು ಮತ್ತು ವಯಸ್ಕರಲ್ಲಿ ನಿರ್ಜಲೀಕರಣದ ಸಮಸ್ಯೆಯುಂಟಾದಾಗ ಚಿಕಿತ್ಸೆಗಾಗಿ ORS ಜೀವರಕ್ಷಕ ಮತ್ತು ಅಗ್ಗದ ವೈದ್ಯಕೀಯ ಆಯ್ಕೆಯಾಗಿದೆ. ಆದ್ದರಿಂದ ORS ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.