ನ್ಯೂಸ್ ನಾಟೌಟ್: ಮಳೆಗಾಲ ಶುರುವಾಯಿತು, ಮನುಷ್ಯನಿಗೆ ಹಾವುಗಳ ಉಪಟಳವು ಜೋರಾಯಿತು.
ಹಾಗೆಯೇ ಇಲ್ಲೊಂದು ಹಾವು ನಿಲ್ಲಿಸಿದ ಆಟೋ ರಿಕ್ಷಾವನ್ನು ಏರಿ ಸತತ ಮೂರು ಗಂಟೆಗಳ ಕಾಲ ಚಾಲಕನ ಹೈರಾಣಾಗಿಸಿದೆ. ಹಾವು ನೋಡಿ ಗಾಬರಿಯಾದ ಆಟೋ ಚಾಲಕ ಗಾಡಿ ನಿಲ್ಲಿಸಿ ಹಾವನ್ನು ಹಿಡಿಯೋಕೆ ಯತ್ನಿಸಿದಾಗ ಹಾವು ರಿಕ್ಷಾದ ಎಂಜಿನ್ ಒಳಗೆ ನುಗ್ಗಿದೆ. ಎಂಜಿನ್ ಒಳಗೆ ನುಗ್ಗಿದ ಹಾವನ್ನು ರಿಕ್ಷಾದಿಂದ ಹೊರಕ್ಕೆ ತೆಗೆಯೋಕೆ ರಿಕ್ಷಾ ಚಾಲಕ ಸತತ ಮೂರು ಗಂಟೆ ಒದ್ದಾಡಿದ್ದಾರೆ.
ಜೂನ್ 30ರಂದು ಸುಳ್ಯದ ಗಾಂಧಿನಗರದಲ್ಲಿ ಆಟೋ ಚಾಲಕರಾಗಿರುವ ಮುಸ್ತಫಾ ಅನ್ನುವವರ ಆಟೋ ರಿಕ್ಷಾ ಅರಂಬೂರಿನ ಪಾಲಡ್ಕದತ್ತ ತೆರಳುತ್ತಿತ್ತು. ಚಲಿಸುತ್ತಿದ್ದ ಗಾಡಿಯ ಮುಂದಿನ ಭಾಗದಿಂದ ಕನ್ನಡಿಯಲ್ಲಿ ಕಟ್ಟ ಮಲಕರಿ ಹಾವೊಂದು ಚಾಲಕರಿಗೆ ಕಾಣಿಸಿಕೊಂಡಿದೆ. ತಕ್ಷಣ ಅವರು ಗಾಬರಿಯಿಂದ ಆಟೋ ನಿಲ್ಲಿಸಿ ಅದನ್ನು ಹುಡುಕಿದ್ದಾರೆ. ಆದರೆ ಚಾಲಾಕಿ ಹಾವು..! ಗಾಡಿಯ ಎಂಜಿನ್ ಒಳಗೆ ನುಗ್ಗಿ ಮುಸ್ತಫಾ ಅವರೊಂದಿಗೆ ಕಣ್ಣಾಮುಚ್ಚಾಲೆ ಆಟವಾಡಿದೆ.
ಎಷ್ಟೇ ಹುಡುಕಿದರೂ ಹಾವು ಸಿಗುವುದೇ ಇಲ್ಲ. ನಂತರ ರಿಕ್ಷಾವನ್ನು ಎತ್ತಿ, ಮಗುಚಿ ಚೆಕ್ ಮಾಡಿದರೂ ಹಾವು ಎಲ್ಲೂ ಕಾಣಿಸುವುದಿಲ್ಲ. ಕೊನೆಗೆ ರಿಕ್ಷಾವನ್ನ ಸರ್ವೀಸ್ ಸ್ಟೇಷನ್ ಗೆ ತಂದು ಹಾವನ್ನು ಹೊರಗೆ ತೆಗೆಯುವ ಕೆಲಸ ಮಾಡಲಾಯಿತು. ಹಾವನ್ನು ಹಿಡಿದು ಬೇರೆಡೆಗೆ ಸುರಕ್ಷಿತವಾಗಿ ತಂದು ಬಿಡಲಾಯಿತು. ಇದೆಲ್ಲದರ ನಡುವೆ ಮುಸ್ತಫಾ ಅವರು ಮೂರು ಗಂಟೆಗಳ ಕಾಲ ಹಾವಿನೊಂದಿಗಿನ ಸಮರದಲ್ಲಿ ತಮ್ಮ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುವಂತಾಯಿತು.