ನ್ಯೂಸ್ ನಾಟೌಟ್: ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಸುಳ್ಯ ತಾಲೂಕಿನಾದ್ಯಂತ ಹೆಚ್ಚುತ್ತಿದೆ. ಜನರಲ್ಲಿ ಒಂದು ರೀತಿಯ ಆತಂಕ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿಯಲ್ಲಿ ಹೋಟೆಲ್ ವೊಂದರ ತ್ಯಾಜ್ಯ ನೀರು ರಿಕ್ಷಾ ನಿಲ್ದಾಣದ ಒಳಗೆ ನುಗ್ಗುತ್ತಿದೆ. ಇದರಿಂದ ಸಾರ್ವಜನಿಕರು ಕಷ್ಟದಿಂದ ನಡೆದಾಡುವಂತಾಗಿದೆ. ಮಾತ್ರವಲ್ಲ ಆಟೋ ಚಾಲಕರು ಮೂಗು ಹಿಡಿದೇ ಆಟೋ ಬಾಡಿಗೆ ಮಾಡುವ ಪರಿಸ್ಥಿತಿ ಬಂದೊದಗಿದೆ ಎನ್ನುವ ದೂರು ಕೇಳಿ ಬಂದಿದೆ.
ಈ ಬಗ್ಗೆ ಆಟೋ ಚಾಲಕರೊಬ್ಬರು ‘ನ್ಯೂಸ್ ನಾಟೌಟ್’ ಜೊತೆಗೆ ಮಾತನಾಡಿದ್ದಾರೆ. ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. “ಎಲ್ಲ ಕಡೆ ಡೆಂಗ್ಯೂ, ಮಲೇರಿಯಾ ಹರಡುತ್ತಿದೆ. ನಮ್ಮ ರಿಕ್ಷಾ ನಿಲ್ದಾಣದಲ್ಲಿಯೇ ತ್ಯಾಜ್ಯ ನೀರು ಹರಿದಾಡುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಸಮಸ್ಯೆ ಬೀರಬಹುದು. ತಕ್ಷಣ ಈ ತ್ಯಾಜ್ಯ ನೀರನ್ನು ಹೊರಗೆ ಬರುವುದಕ್ಕೆ ನಗರ ಪಂಚಾಯತ್ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಲವು ಸಲ ಈ ಬಗ್ಗೆ ನಾವು ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಳೆದ ವರ್ಷವೂ ಇಲ್ಲಿ ಇದೇ ರೀತಿ ಆಗಿತ್ತು. ಆಗ ತ್ಯಾಜ್ಯ ನೀರು ರಸ್ತೆಗೆ ಬಿಟ್ಟವರಿಗೆ ಆರೋಗ್ಯ ಅಧಿಕಾರಿಯೊಬ್ಬರು ದಂಡವಿಧಿಸಿದ್ದರು. ಇದೀಗ ಮತ್ತೆ ಅದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವುದು ನೋವಿನ ಸಂಗತಿ ಎಂದು ತಿಳಿಸಿದರು.