|ರವೂಫ್ ಪೈಂಬೆಚ್ಚಾಲ್
ನ್ಯೂಸ್ ನಾಟೌಟ್: ಜಿಲ್ಲೆಯಲ್ಲಿ ರೆಡ್ ಅಲರ್ಟ್, ಜಿಲ್ಲಾಧಿಕಾರಿಯಿಂದ ಶಾಲಾ ಕಾಲೇಜಿಗೆ ರಜೆ ಘೋಷಣೆ. ಇದು ಆಗಾಗ್ಗ ನಾವು ಜಾಲತಾಣದಲ್ಲಿ ನೋಡುತ್ತಿರುವ ಸುದ್ದಿ.
ನಾವು ಚಿಕ್ಕಂದಿನಲ್ಲಿ ಶಾಲೆಗೆ ಹೋಗುತ್ತಿರುವಾಗ ಈ ತರಹದ ರಜೆ ಕಂಡಿದ್ದೇ ಇಲ್ಲ. ಜೂನ್ ಒಂದಕ್ಕೆ ಶಾಲೆ ಪ್ರಾರಂಭವಾಗುವುದರ ಜೊತೆಗೆ ಮಳೆಯೂ ಶುರುವಾಗುತ್ತದೆ. ಮಳೆಯೆಂದರೆ ಮಳೆ,ತೋಡು,ತೊರೆ, ಹಳ್ಳ ತುಂಬಿ ಹರಿಯುತ್ತಿರುತ್ತದೆ. ಈಗಿನ ಹಾಗೆ ಕಾಂಕ್ರೀಟ್ ಸೇತುವೆ,ಮೋರಿಗಳಿಲ್ಲ. ಕೆಲವೊಂದು ಕಡೆ ಮರದ ಸೇತುವೆ ಇರುತ್ತದೆ. ಅದನ್ನು ಸಾಹಸದಿಂದ ದಾಟಿ ಹೋಗಬೇಕು. ಗುಡ್ಡ ಹತ್ತಿ ಇಳಿಯಬೇಕು. ಗಾಳಿ ಇರಲಿ ಮಳೆ ಇರಲಿ ನಡೆದೇ ಶಾಲೆಗೆ ಹೋಗಬೇಕು. ಇಬ್ಬರೋ ಮೂವರೋ ಒಂದೇ ಕೊಡೆಯಲ್ಲಿ ಒದ್ದೆಯಾಗಿಕೊಂಡು ಹೋದದ್ದೂ ಇದೆ. ಗಾಳಿಗೆ ಶಾಲೆಯ ಹಂಚು ಹಾರಿ ಹೋದರೂ, ಛಾವಣಿ ಸೋರುತ್ತಿದ್ದರೂ ಸಂಜೆಯವರೆಗೂ ಶಾಲೆ ಇರುತ್ತಿತ್ತು .ರಜೆಯ ಮಾತೇ ಇಲ್ಲ.
ಈಗ ಕಾಲ ಬದಲಾಗಿದೆ, ತಂತ್ರಜ್ಞಾನ ಮುಂದುವರೆದಿದೆ. ಮುಂಚಿತವಾಗಿಯೇ ಹವಾಮಾನದ ವಿವರ ಲಭಿಸುತ್ತದೆ. ರೆಡ್ ಅಲರ್ಟ ಘೋಷಣೆ ಆಗುತ್ತದೆ. ಶಾಲೆಗೂ ರಜೆ ನೀಡಲಾಗುತ್ತದೆ. ಆದರೆ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ, ಇಂದು ಬಹುತೇಕ ಹಳ್ಳಿಗಳ ಹಳ್ಳ ತೋಡುಗಳಿಗೆ ಸೇತುವೆ ಮೋರಿಗಳಿವೆ. ನಡೆದುಕೊಂಡು ಹೋಗಬೇಕಾಗಿಯೂ ಇಲ್ಲ, ವಾಹನದ ವ್ಯವಸ್ಥೆ ಇದೆ. ಹಳ್ಳಿಗಳಲ್ಲಿ ಹಿಂದಿನಷ್ಟು ಅಪಾಯ ಈಗ ಇಲ್ಲ. ಈಗ ಅಪಾಯ ಇರುವುದು ಪೇಟೆಗಳಲ್ಲಿ ಮಾತ್ರ. ಕಟ್ಟಡಗಳನ್ನು ಕಟ್ಟುವಾಗ, ರಸ್ತೆ ನಿರ್ಮಾಣ ಮಾಡುವಾಗ ಮಳೆ ನೀರು ಹೋಗುವ ಕಾಲುವೆಗಳೆಲ್ಲ ನಾಶವಾಗದ ಪರಿಣಾಮ ಸಣ್ಣಮಳೆ ಬಂದರೂ ಕೃತಕ ನೆರೆ ಸೃಷ್ಟಿಯಾಗುತ್ತದೆ. ಇನ್ನು ದೊಡ್ಡ ಮಳೆ ಬಂದರೆ ಹೇಗಿರಬಹುದು..? ನಾವು ಮಾಡಿದ ಸ್ವಯಂ ಕೃತಾಪರಾಧದಿಂದಾಗಿ ಸಣ್ಣ ಮಳೆಬಂದರೂ ಭಯಪಡಬೇಕಾದ ಪರಿಸ್ಥಿತಿ ಗೆ ನಾವು ತಲುಪಿದ್ದೇವೆ.