ನ್ಯೂಸ್ ನಾಟೌಟ್: ಒಡಿಶಾದ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ರಥ ಎಳೆಯುವ ವೇಳೆ ನೂಕುನುಗ್ಗಲು ಉಂಟಾಗಿದ್ದರಿಂದ ಉಸಿರುಗಟ್ಟಿ ಓರ್ವ ಭಕ್ತ (Devotee) ಸಾವನ್ನಪ್ಪಿದ ಘಟನೆ ಭಾನುವಾರ(ಜುಲೈ 7) ನಡೆದಿದೆ.
ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿದ್ದು, ಉಸಿರಾಡಲು ಆಗದೇ ಓರ್ವ ಭಕ್ತ ಮೃತಪಟ್ಟಿದ್ದಾರೆ. ನೂಕುನುಗ್ಗಲು ಬಳಿಕ ಕಾಲ್ತುಳಿತವೂ ಉಂಟಾಗಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲ್ತುಳಿತದ ಬಳಿಕ ಸುಮಾರು 300 ಜನರನ್ನ ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 50 ಮಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಶ್ಚಾರ್ಜ್ ಮಾಡಲಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಪ್ರಸಿದ್ಧ ಜಗನ್ನಾಥ ದೇಗುಲದ ವಾರ್ಷಿಕ ರಥಯಾತ್ರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಿದ್ದರು.