ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದ ಭಕ್ತರ ಮತಾಂತರ..? ಒಬ್ಬನ ಬಂಧನ, ಮತ್ತೊಬ್ಬ ಪರಾರಿ..!

ನ್ಯೂಸ್‌ ನಾಟೌಟ್‌: ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರ ಮತಾಂತರಕ್ಕೆ ಯತ್ನಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ನಡೆದಿದ್ದು, ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಮತಾಂತರ ಸಂಬಂಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಮಂತ್ರಾಲಯಕ್ಕೆ ಪಾದಯಾತ್ರೆ ತೆರಳುತ್ತಿದ್ದ ಯಾತ್ರಿಕರಿಗೆ ಇಬ್ಬರು ಜುಲೈ 18 ರಂದು ಇಸ್ಲಾಂ ಧರ್ಮದ ಬಗ್ಗೆ ಬೋಧನೆ ಮಾಡಿದ್ದಾರೆ ಎಂಬ ಆರೋಪವಿದೆ ಮತ್ತು ಅದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯಾತ್ರಾತ್ರಿಗಳಿಬ್ಬರು ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿ ಮೂಲಕ ಮಂತ್ರಾಲಯಕ್ಕೆ ತೆರಳುತ್ತಿದ್ದರು. ಇದೇ ವೇಳೆ, ತೆಕ್ಕಲಕೋಟೆ ಪಟ್ಟಣದ ಹುಸೇನ್ ಭಾಷಾ (44), ಸಾಯಿ ಬಾಬಾ (24) ಮತಾಂತರಕ್ಕೆ ಯತ್ನ ಮಾಡಿದ್ದಾರೆ ಎನ್ನಲಾಗಿದೆ. ಕೇಸರಿ ಧ್ವಜ ಹಿಡಿದುಕೊಂಡು ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದವರಿಗೆ ಆರೋಪಿಗಳು ಇಸ್ಲಾಂ ಧರ್ಮದ ಬೋಧನೆ ಮಾಡಿದ್ದಾರೆ. ಈ ಬಗ್ಗೆ ಗಾದಿಲಿಂಗಪ್ಪ ಎಂಬವರು ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನ್ಯ ಧರ್ಮದವರು ತಮ್ಮ ಗುರುಗಳ ಬಗ್ಗೆ ಭೋದನೆ ಮಾಡುತ್ತಿರುವ ದೃಶ್ಯ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ, ಮತಾಂತರ ಮಾಡಲು ಪ್ರಯತ್ನ ಮಾಡಿದ ಆರೋಪದಲ್ಲಿ ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಸೇನ್ ಭಾಷ ಎಂಬಾತನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.