ನ್ಯೂಸ್ ನಾಟೌಟ್ : ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಗುರುವಾರ(ಜು.25) ಮುಂಜಾನೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಅನುಪಮ್ ಅಗ್ರವಾಲ್ ನೇತೃತ್ವದ ತಂಡ ಹಠಾತ್ ದಾಳಿ ನಡೆಸಿದೆ.
ಈ ವೇಳೆ ಗಾಂಜಾ, ಮೊಬೈಲ್ ಗಳು, ಮಾರಕಾಯುಧ ಸಹಿತ ನಿಷೇಧಿತ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜೈಲಿನ ಭದ್ರತೆ, ಕೈದಿಗಳ ಸುರಕ್ಷತೆ, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ 2 ಡಿಸಿಪಿಗಳು, 3 ಎಸಿಪಿಗಳು, 15 ನಿರೀಕ್ಷಕರು ಮತ್ತು ಸುಮಾರು 150 ಸಿಬ್ಬಂದಿ ಪಾಲ್ಗೊಂಡಿದ್ದರು. ಜೈಲಿನ ಎಲ್ಲಾ ಬ್ಲಾಕ್ಗಳನ್ನು ಏಕಕಾಲದಲ್ಲಿ ಕವರ್ ಮಾಡಲು ಹಲವಾರು ತಂಡಗಳನ್ನು ರಚಿಸಲಾಗಿತ್ತು.
ಮುಂಜಾನೆ 4 ಗಂಟೆಗೆ ಆರಂಭವಾದ ಕಾರ್ಯಾಚರಣೆ ಸುಮಾರು 1.30 ಗಂಟೆಗಳ ಕಾಲ ನಡೆಯಿತು. ದಾಳಿ ವೇಳೆ 25 ಮೊಬೈಲ್ ಫೋನ್ಗಳು, 1 ಬ್ಲೂಟೂತ್, 5 ಇಯರ್ಫೋನ್ಗಳು, 1 ಪೆನ್ ಡ್ರೈವ್, 5 ಚಾರ್ಜರ್ಗಳು, 1 ಜತೆ ಕತ್ತರಿ, 3 ಕೇಬಲ್ಗಳು ಮತ್ತು ಗಾಂಜಾ ಮತ್ತು ಇತರ ಡ್ರಗ್ಗಳ ಬಹು ಪ್ಯಾಕೆಟ್ಗಳು ಲಭಿಸಿವೆ.