ಲೋಕಾಯುಕ್ತ ಅಧಿಕಾರಿಗಳ ದಾಳಿಯ ವೇಳೆ ಚಿನ್ನ ತುಂಬಿದ ಬ್ಯಾಗ್ ಅನ್ನು ಪಕ್ಕದ ಮನೆಗೆ ಎಸೆದ ವ್ಯಕ್ತಿ..! ಅಧಿಕಾರಿಗಳನ್ನೇ ಕೂಗಿ ಕರೆದ ಪಕ್ಕದ ಮನೆಯವರು..!

ನ್ಯೂಸ್ ನಾಟೌಟ್: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆಗೆ ದಾಳಿ ಮಾಡಿದ್ದಾರೆ. ತಮ್ಮ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಗೆ ಬರುತ್ತಿದ್ದಂತೆ ಅಧಿಕಾರಿಯೊಬ್ಬರು ಚಿನ್ನ ಮತ್ತು ಹಣ ಇದ್ದ ಬ್ಯಾಗ್‌ನ್ನು ಕಿಟಕಿಯಿಂದ ಪಕ್ಕದ ಮನೆಗೆ ಎಸೆದ ಪ್ರಸಂಗ ವರದಿಯಾಗಿದೆ. ಕಾನೂನು ಮಾಪನ ಇಲಾಖೆ ಡೆಪ್ಯುಟಿ ಕಂಟ್ರೋಲರ್ ಅತ್ಹರ್ ಆಲಿ ಎಂಬವರ ನಿವಾಸ ಮತ್ತು ಕಚೇರಿ ಮೇಲೆ ಇಂದು(ಜುಲೈ.19) ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಂಜಾನೆ 5:30 ರ ಹೊತ್ತಿಗೆ ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ನಿವಾಸಕ್ಕೆ ತೆರಳಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು 5 ಗಂಟೆಗಳಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಅತ್ಹರ್ ಆಲಿ ಮನೆಯಲ್ಲಿ ಅಪಾರ ಪ್ರಮಾಣದ ಹಣ, ಚಿನ್ನ ಪತ್ತೆಯಾಗಿದ್ದು, ಅಧಿಕಾರಿಗಳು ಮನೆಗೆ ಬರುತ್ತಿದ್ದಂತೆ ಅತ್ಹರ್ ಆಲಿ ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಎಸೆದಿದ್ದರು. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಇವರ ಮೊದಲ ಅಂತಸ್ತು ಇತ್ತು ಎನ್ನಲಾಗಿದೆ. ಬ್ಯಾಗ್ ಎಸೆದಿದ್ದನ್ನ ನೋಡಿ ನೆರೆಮನೆ ನಿವಾಸಿ ಖುದ್ದು ಅಧಿಕಾರಿಗಳನ್ನ ಕರೆದಿದ್ದಾರೆ. ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ನಂತರ ಅಧಿಕಾರಿಗಳು ಬ್ಯಾಗ್ ವಶಕ್ಕೆ ಪಡೆದಿದ್ದಾರೆ. ಒಂದು ಬ್ಯಾಗ್ ತುಂಬಾ ಚಿನ್ನದ ವಸ್ತುಗಳು ಸಿಕ್ಕಿವೆ. ಸದ್ಯ ನೆರಮನೆಯಲ್ಲಿ ಅಧಿಕಾರಿಗಳ ತಂಡ ತಲಾಶ್ ಮುಂದುವರಿಸಿದೆ ಎನ್ನಲಾಗಿದೆ. Click 👇