ನ್ಯೂಸ್ ನಾಟೌಟ್: ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಸಂಭವಿಸಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮುಖ್ಯವಾಗಿ ರಾಜ್ಯದ ಪ್ರಮುಖ ನಗರವಾದ ಮಂಗಳೂರು ಬೆಂಗಳೂರು ಬೆಸೆಯುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಭೂಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಇದರಿಂದ ಬಂದರು ನಗರಿ ಮಂಗಳೂರು-ಬೆಂಗಳೂರು ಮಧ್ಯೆ ವಾಣಿಜ್ಯೋದ್ಯಮ ನಿಂತಿದೆ. ನೂರಾರು ಕೋ.ರೂ.ಗಳ ವ್ಯವಹಾರ ಈ ಎರಡೂ ನಗರಗಳ ಮಧ್ಯೆ ನಡೆಯುತ್ತಿದ್ದು, ಎನ್ಎಂಪಿಎ, ಎಂಆರ್ಪಿಎಲ್, ಎಂಎಸ್ಇಝಡ್ ಸಹಿತ ದೇಶದ ಬೃಹತ್ ಆರ್ಥಿಕ ವ್ಯವಹಾರ ನಡೆಸುವ ಉದ್ದಿಮೆಗಳು ಮಂಗಳೂರು ಭಾಗದಲ್ಲಿವೆ. ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಪರ್ಯಾಯವಾಗಿ ಮಂಗಳೂರಿಗೆ ವಿಶೇಷ ರೈಲು ಒದಗಿಸುವಂತೆ ದಕ್ಷಿಣಕನ್ನಡ ಸಂಸದ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಮತ್ತು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (ಡಿಆರ್ಎಂ) ಪತ್ರ ಬರೆದು ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಗಳನ್ನು ತುರ್ತಾಗಿ ಒದಗಿಸುವಂತೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿರುವ ರೈಲ್ವೆ ಅಧಿಕಾರಿಗಳು ಮಂಗಳೂರು ಬೆಂಗಳೂರು ಮಧ್ಯೆ ಎರಡು ವಿಶೇಷ ರೈಲಿನ ಘೋಷಣೆ ಮಾಡಿದ್ದಾರೆ. ಮಂಗಳೂರು ಬೆಂಗಳೂರು ನಡುವೆ ಪ್ರತಿದಿನ ಪ್ರಯಾಣಿಸುವ ಜನರ ಸಂಖ್ಯೆ ಮತ್ತು ಪರ್ಯಾಯ ಸಾರಿಗೆ ಆಯ್ಕೆಗಳ ಕೊರತೆಯನ್ನು ಪರಿಗಣಿಸಿ, ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸುವ ಅಗತ್ಯವನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರದಲ್ಲಿ ಉಲ್ಲೇಖಿಸಿದ್ದರು. ಈ ಹೆಚ್ಚುವರಿ ಸೇವೆಗಳನ್ನು ಶೀಘ್ರ ಜಾರಿಗೊಳಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.