ಕೆ.ಎಸ್.ಆರ್.ಟಿ.ಸಿ(KSRTC) ಯಿಂದ ಊಟ, ತಿಂಡಿ ಸಹಿತ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಮಳೆ ಜೋರಾಗಿರುವುದರಿಂದ ಜೋಗ ಜಲಪಾತ ಭೋರ್ಗರೆಯುತ್ತ ಧುಮ್ಮುಕ್ಕುತ್ತಿದೆ. ಮುಂಗಾರಿನ ವೇಳೆ ಜಲಪಾತವನ್ನು ನೋಡ ಬಯಸಿದರೆ ನಿಮಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಊಟ, ತಿಂಡಿ ಸಹಿತವಾಗಿ ವಿಶೇಷ ಟೂರ್​ ಪ್ಯಾಕೇಜ್​ ಘೋಷಿಸಿದೆ. ಬೆಂಗಳೂರಿನಿಂದ ವಾರಾಂತ್ಯ ಶುಕ್ರವಾರ (ಜು.19) ಮತ್ತು ಶನಿವಾರ (ಜು.20) ಎರಡು ದಿನವು ಕೆಎಸ್​ಆರ್​​ಟಿಸಿಯ ನಾನ್​ ಎಸಿ ಸ್ಲೀಪರ್​ ಬಸ್​ಗಳು ಪ್ರವಾಸಿಗರನ್ನು ಕರೆದುಕೊಂಡು ಹೋಗಿ, ಮರಳಿ ಕರೆತರುತ್ತವೆ. ಒಬ್ಬರಿಗೆ 3 ಸಾವಿರ ರೂ. ( 6 ರಿಂದ 12 ವರ್ಷದವರಿಗೆ 2,800 ರೂ.) ದರ ನಿಗದಿ ಮಾಡಿದೆ. ರಾತ್ರಿ 10:30 ವರೆಗೆ ಬೆಂಗಳೂರಿನಿಂದ ಹೊರಡುವ ಬಸ್​ ನಸುಕಿನ ಜಾವ 5:30ಕ್ಕೆ ಸಾಗರ ತಲುಪಲಿದೆ. ನಂತರ ಹೋಟೆಲ್​ನಲ್ಲಿ ಫ್ರೆಶ್​ ಅಪ್​ ಹಾಗೂ ವಿಶ್ರಾಂತಿಗೆ ಬೆಳಗ್ಗೆ 7 ಗಂಟೆವರೆಗೆ ಸಮಯವಿರುತ್ತದೆ. ಬಳಿಕ ಬೆಳಗ್ಗೆ 7:15ಕ್ಕೆ ಉಪಹಾರ ತಿಂದು ಅಲ್ಲಿಂದ 7:30ಕ್ಕೆ ವರದಹಳ್ಳಿ ತಲುಪಲಿದೆ. ನಂತರ ಅರ್ಧ ಗಂಟೆಯ ಆಸು ಪಾಸಿನಲ್ಲಿ ವರದಮೂಲದಿಂದ ಇಕ್ಕೇರಿ, ಕೆಳದಿ, ಸಾಗರಕ್ಕೆ ಬಸ್​ ಬರಲಿದೆ ಎಂದು ಮಾಹಿತಿ ನೀಡಲಾಗಿದೆ. ಸಾಗರದಲ್ಲಿ 1:15 ಕ್ಕೆ ಮಧ್ಯಾಹ್ನದ ಊಟ ಮುಗಿಸಿಕೊಂಡು ಮಧ್ಯಾಹ್ನ 2 ಗಂಟೆಗೆ ಜೋಗ ತಲುಪಲಿದೆ. ಸಾಯಂಕಾಲ 5:15ಕ್ಕೆ ಸುಮಾರಿಗೆ ಜೋಗದಿಂದ ಹೊರಟು 6 ಗಂಟೆ ಹೊತ್ತಿಗೆ ಸಾಗರ ತಲುಪಲಿದೆ. ಸಾಗರದಲ್ಲಿ ಒಂದು ಗಂಟೆ ಕಾಲ ಶಾಪಿಂಗ್​ ಮಾಡಿ, ರಾತ್ರಿ ಊಟ ಅಲ್ಲಿಯೇ ಮುಗಿಸಿಕೊಂಡು, 11 ಗಂಟೆಗೆ ಬಸ್​ ಸಾಗರದಿಂದ ಹೊರಟು ನಸುಕಿನ ಜಾವ 5ಕ್ಕೆ ಬೆಂಗಳೂರು ತಲುಪಲಿದೆ ಎಂದು ಟೈಮ್ ಟೇಬಲ್ ನೀಡಲಾಗಿದೆ. ಇದರೊಂದಿಗೆ ಕೆಎಸ್​ಆರ್​ಟಿಸಿ ಬೆಂಗಳೂರಿನಿಂದ ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ಜಲಪಾತಕ್ಕೂ ಟೂರ್​ ಪ್ಯಾಕೇಜ್​ ಘೋಷಿಸಿದೆ. ಒಬ್ಬರಿಗೆ 500 ರೂ. (6 ರಿಂದ 12 ವರ್ಷದವರಿಗೆ 350 ರೂ.) ನಿಗದಿ ಮಾಡಿದೆ ಎನ್ನಲಾಗಿದೆ. Click 👇