ನ್ಯೂಸ್ ನಾಟೌಟ್: ತುಳು ನಾಡಿನ ಕಾರಣೀಕ ಪುರುಷರಾದ ಕೋಟಿ-ಚೆನ್ನಯ್ಯರ ಕಥೆ ನಮಗೆಲ್ಲರಿಗೂ ಗೊತ್ತು. ಅವರಿಬ್ಬರು ಮಹಾನ್ ಪವಾಡ ಪುರುಷರು. ತುಳುನಾಡಿನಾದ್ಯಂತ ಸತ್ಯ ಧರ್ಮದ ಫಸಲನ್ನು ಬಿತ್ತಿದ್ದ ಕೋಟಿ-ಚೆನ್ನಯ್ಯರ ಹೆಸರು ಅಜರಾಮರ. ಅಂತಹ ದೈವಗಳ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಗಿರೀಶ್ ಪೂಜಾರಿ ಮೃತದೇಹ ಇದೀಗ ನದಿಯಲ್ಲಿ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎಣ್ಮೂರು ಶ್ರೀ ನಾಗಬ್ರಹ್ಮ ಆದಿ ಬೈದರ್ಕಳ ಗರಡಿಯ ಕೋಟಿ ಚೆನ್ನಯ್ಯ ನೇಮೋತ್ಸವದ ‘ಕೋಟಿ’ ಪಾತ್ರಿಯಾಗಿ ಸೇವೆಗೈಯ್ಯುತ್ತಿದ್ದ ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಗಿರೀಶ್ ಪೂಜಾರಿಯ ಮೃತದೇಹ ಅಡ್ಡೂರು ಪೊಳಲಿಯ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.
ಗಿರೀಶ್ ಮೂಲತಃ ಬಂಟ್ವಾಳದವರು. ಇವರ ತಂದೆ ಹೆಸರು ಬಾಬು ಪೂಜಾರಿ. ಇವರು ಎಣ್ಮೂರಿನಲ್ಲಿ ಕೋಟಿ ಪಾತ್ರಿಯಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದರು. ಜೀವನ ನಿರ್ವಹಣೆಗಾಗಿ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಜು.೩ರಂದು ಬಜಪೆ ವಿಮಾನ ನಿಲ್ದಾಣಕ್ಕೆ ಬಾಡಿಗೆ ಇದೆ ಎಂದು ರಿಕ್ಷಾದಲ್ಲಿ ತೆರಳಿದ್ದರು.
ಹಾಗೆ ಹೋದವರು ಎಲ್ಲಿ ಹೋದರು ಏನು ಆದರೂ ಅನ್ನುವ ಮಾಹಿತಿ ಯಾರಿಗೂ ಇರಲಿಲ್ಲ. ಮರುದಿನ ಬೆಳ್ ಬೆಳಗ್ಗೆ ಪೊಳಲಿಯ ಅಡ್ಡೂರು ಸೇತುವೆಯಲ್ಲಿ ಸ್ಟಾರ್ಟ್ ಆಗಿರುವ ಸ್ಥಿತಿಯಲ್ಲಿ ನಿಂತಿರುವ ಆಟೋ ರಿಕ್ಷಾವನ್ನು ಪೊಲೀಸರು ಗಮನಿಸಿದ್ದಾರೆ. ಇದು ಯಾಕೆ ಚಾಲೂ ಸ್ಥಿತಿಯಲ್ಲಿದೆ ಎಂದು ಪರಿಶೀಲನೆ ನಡೆಸಿದ್ದಾರೆ. ರಿಕ್ಷಾ ಚಾಲಕ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ಆಟೋದಲ್ಲಿ ಸಿಕ್ಕಿದ ದಾಖಲೆ ಪತ್ರಗಳ ಪರಿಶೀಲಿಸಿ ಅದರಲ್ಲಿದ್ದ ಮಾಹಿತಿಯನ್ನು ಮನೆಯವರಿಗೆ ಕಳುಹಿಸಿ ಕೊಟ್ಟಿದ್ದಾರೆ.
ಗಿರೀಶ್ ಅವರ ಸಂಬಂಧಿಕರು ಮತ್ತು ಪೊಲೀಸರ ಸಮ್ಮಖದಲ್ಲಿ ನೀರಿನಲ್ಲಿ ಗಿರೀಶ್ ಬಿದ್ದಿರಬಹುದು ಅನ್ನುವ ಅನುಮಾನದ ಮೇರೆಗೆ ನದಿಯಲ್ಲಿ ಹುಡುಕಾಟ ನಡೆಸಿದರು. ಗುರುವಾರ ಸಂಜೆವರೆಗೂ ಪತ್ತೆಯಾಗಿರಲಿಲ್ಲ. ಆ ಬಳಿಕ ಮುಳುಗು ತಜ್ಞರು ಬಂದ ಬಳಿಕ ಮಧ್ಯಾಹ್ನದ ಹೊತ್ತಿಗೆ ನದಿಯಲ್ಲಿ ಮೃತದೇಹ ಪತ್ತೆಯಾಗುತ್ತದೆ.
ಬಜಪೆ ಪೊಲೀಸ್ ಠಾಣೆಯಲ್ಲಿ ಮೃತ ಗಿರೀಶ್ (೩೭ ವರ್ಷ) ಅವರ ಬಾವ ನಾಗೇಶ್ ದೂರಿನ ಪ್ರತಿ ಪ್ರಕಾರ ಗಿರೀಶ್ ಹಾಗೂ ಅವರ ಪತ್ನಿ ತಾರ ನಡುವೆ ಕೆಲವು ದಿನಗಳ ಹಿಂದೆ ವೈಮನಸ್ಸಾಗಿತ್ತು. ಈ ಹಿನ್ನೆಲೆಯಲ್ಲಿ ಗಿರೀಶ್ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣದಿಂದ ಅವರು ಮನೆಯಿಂದ ಹೊರಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.