ನ್ಯೂಸ್ ನಾಟೌಟ್: ರಾಜ್ಯಾದ್ಯಂತ ಡೆಂಗ್ಯೂ ಹಾವಳಿ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರಕ್ಕೆ ಬಾಲಕನೋರ್ವ ಬಲಿಯಾಗಿದ್ದಾನೆ.
ಮೃತ ಬಾಲಕನನ್ನು ಅಂಜನಾಪುರದ ಗಗನ್ (11 ) ಎಂದು ಗುರುತಿಸಲಾಗಿದೆ. ಈತ ಜಂಬೂಸವಾರಿ ದಿಣ್ಣೆಯ ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದು, ಜ್ವರದಿಂದಾಗಿ ಕಳೆದ ಮೂರು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇದು ಬೆಂಗಳೂರಿನಲ್ಲಿ ಡೆಂಗ್ಯುವಿಗೆ ಪುಟ್ಟ ಮಗುವಿನ ಮೊದಲ ಸಾವು ಆಗಿದೆ. ಕಳೆದ ವಾರ ಕಗ್ಗದಾಸಪುರದಲ್ಲಿ 27 ವರ್ಷ ಯುವಕ ಡೆಂಗ್ಯುವಿನಿಂದ ಮೃತಪಟ್ಟಿದ್ದ. ಹಾಸನದಲ್ಲಿ ಮೂವರು ಬಾಲಕಿಯರು ಡೆಂಗ್ಯುವಿನಿಂದ ಮೃತಪಟ್ಟಿದ್ದಾರೆ. ಒಟ್ಟು ಏಳು ಮಂದಿ ರಾಜ್ಯದಲ್ಲಿ ಇದುವರೆಗೆ ಡೆಂಗ್ಯೂವಿನಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಡೆಂಗ್ಯೂ ಜ್ವರ ಪತ್ತೆಗೆ ಎರಡು ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪರೀಕ್ಷೆಗಳಿಗೆ ಒಟ್ಟು 600 ರೂ. ನಿಗದಿಪಡಿಸಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ.
ರಾಜ್ಯದೆಲ್ಲಡೆ ಡೆಂಗ್ಯೂ ಹಾವಳಿ ಮುಂದುವರಿದೆ. ಹಲವೆಡೆ ಡೆಂಗ್ಯೂ ಪರೀಕ್ಷೆ ನಡೆಸದೆ ಸಾಮಾನ್ಯ ಜ್ವರಕ್ಕೆ ಔಷಧ ಪಡೆದು ಸುಮ್ಮನಾಗುತ್ತಾರೆ. ಇದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಜ್ವರದ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಡೆಂಗ್ಯೂ ಪರೀಕ್ಷೆ ಮಾಡಿಸಬೇಕು. ನಿರ್ಲಕ್ಷಿಸಿದರೆ ಜೀವಕ್ಕೆ ಆಪತ್ತು ಎದುರಾಗುವ ಸಾಧ್ಯತೆಯಿದೆ.