ನ್ಯೂಸ್ ನಾಟೌಟ್: ಕೇದಾರನಾಥ ದೇಗುಲದ ಕೇದಾರನಾಥ ಧಾಮದಲ್ಲಿ ಚಿನ್ನ ಕಣ್ಮರೆಯಾಗಿದೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರ ಹೇಳಿಕೆ ನೀಡಿದ್ದು, ಇದು ಎಲ್ಲೆಡೆ ಸಂಚಲನ ಮೂಡಿಸಿದೆ.
ಕೇದಾರನಾಥ ದೇಗುಲದಿಂದ 228 ಕಿಲೋಗ್ರಾಂ ಚಿನ್ನ ಕಳ್ಳತನವಾಗಿದೆ ಎಂದು ಸ್ವಾಮಿಜಿಯವರು ಆರೋಪ ಮಾಡಿದ್ದಾರೆ. ಅವರು ಮಾಡಿರುವ ಆರೋಪಕ್ಕೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಬುಧವಾರ(ಜು.17) ಉತ್ತರ ನೀಡಿದ್ದಾರೆ. ಸ್ವಾಮಿ ಅವಿಮುಕ್ತೇಶ್ವರಾನಂದರು ಹೇಳಿಕೆಗಳನ್ನು ನೀಡುವ ಬದಲು ಪ್ರಾಧಿಕಾರವನ್ನು ಸಂಪರ್ಕಿಸಿ ತನಿಖೆಗೆ ಒತ್ತಾಯಿಸಬೇಕು ಅಥವಾ ಸಾಕ್ಷ್ಯಾಧಾರಗಳಿದ್ದರೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ಗೆ ಹೋಗಿ ಅರ್ಜಿ ಸಲ್ಲಿಸಬಹುದು ಎಂದು ಅಜೇಂದ್ರ ತಿಳಿಸಿದ್ದಾರೆ.
ಜುಲೈ 15 ಸೋಮವಾರ ಸ್ವಾಮಿ ಅವಿಮುಕ್ತೇಶ್ವರಾನಂದರು ಕೇದಾರನಾಥದಲ್ಲಿ 228 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಆರೋಪಿಸಿದ್ದರು. “ಕೇದಾರನಾಥದಲ್ಲಿ ಚಿನ್ನದ ಹಗರಣ ನಡೆದಿದೆ. ಆ ವಿಚಾರದ ಬಗ್ಗೆ ಇವರು ಏಕೆ ಚಕಾರ ಎತ್ತುತ್ತಿಲ್ಲ? ಅಲ್ಲಿ ಹಗರಣ ಮಾಡಿ ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಾಣ ಮಾಡಲು ಹೊರಟಿದ್ದಾರೆ. ಅಲ್ಲಿಯೂ ಮತ್ತೊಂದು ಹಗರಣ ನಡೆಯಲಿದೆ. ಕೇದಾರನಾಥದಲ್ಲಿ 228 ಕೆಜಿ ಚಿನ್ನ ನಾಪತ್ತೆಯಾಗಿದೆ; ಯಾವುದೇ ವಿಚಾರಣೆ ನಡೆಸಿಲ್ಲ. ಇದಕ್ಕೆ ಯಾರು ಹೊಣೆ?” ಸ್ವಾಮಿ ಅವಿಮುಕ್ತೇಶ್ವರಾನಂದರು ಪ್ರಶ್ನೆ ಮಾಡಿದ್ದರು.