ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆ ಇಲ್ಲ ಎಂದ ಕೆಎಂಎಫ್..! ಏನಿದು ವದಂತಿ..?

ನ್ಯೂಸ್ ನಾಟೌಟ್: ನಂದಿನಿ ಹಾಲಿನ ಪ್ಯಾಕೆಟ್​​ಗಳಲ್ಲಿ ಪ್ರಮಾಣ ತುಸು ಹೆಚ್ಚಿಸಿ ದರ ಪರಿಷ್ಕರಣೆ ಮಾಡಿದ್ದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (KMF) ಇದೀಗ ನಂದಿನಿ ಮೊಸರು, ಮಜ್ಜಿಗೆ ಹಾಗೂ ಲಸ್ಸಿಯ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಕೆಲವೆಡೆ ವರದಿಯಾಗಿದೆ ಎನ್ನಲಾಗಿದೆ. ಆದರೆ ಇದು ಸುಳ್ಳು ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ. ದರ ಪರಿಷ್ಕರಣೆ ಪ್ರಸ್ತಾವ ಇಲ್ಲ. ವದಂತಿಗಳನ್ನು ನಂಬಬಾರದು ಎಂದು ಸಾರ್ವಜನಿಕರಲ್ಲಿ ಕೆಎಂಎಫ್ ವಿನಂತಿ ಮಾಡಿದೆ. ಕೆಎಂಎಫ್ ಕೆಲ ದಿನಗಳ ಹಿಂದಷ್ಟೇ ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ ​​​ಗೆ 50 ಎಂಎಲ್ ಹೆಚ್ಚುವರಿಯಾಗಿ ಸೇರಿಸಿ ಎರಡು ರೂಪಾಯಿ ಏರಿಕೆ ಮಾಡಲಾಗಿತ್ತು. ನಂದಿನಿ ಹಾಲಿನ ದರ ಏರಿಕೆ ವಿಚಾರ ರಾಜ್ಯದಲ್ಲಿ ತೀವ್ರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಬೆಲೆ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಆ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ‘ಹಾಲಿನ ಬೆಲೆ ಏರಿಕೆ ಮಾಡಿಲ್ಲ. ಹೆಚ್ಚುವರಿ ಹಾಲು ನೀಡಿ ಅದಕ್ಕೆ ದರ ಪಡೆಯಲಾಗುತ್ತಿದೆ. ರೈತರಿಂದ ಖರೀದಿಸಿದ ಹೆಚ್ಚಿನ ಹಾಲಿನ ಮಾರಾಟಕ್ಕಾಗಿ ಈ ರೀತಿ ಮಾಡಲಾಗುತ್ತದೆ’ ಎಂದು ಸ್ಪಷ್ಟನೆ ನೀಡಿದ್ದರು. Click 👇