- +91 73497 60202
- [email protected]
- November 22, 2024 1:15 AM
ಸ್ವಂತ ದುಬಾರಿ ಕಾರಿಗೆ ಸರ್ಕಾರಿ ಸೈರನ್, ಫಲಕ ಹಾಕಿಸಿಕೊಂಡು ತಿರುಗಾಟ..! IAS ಅಧಿಕಾರಿ ಪೂಜಾ ವರ್ಗಾವಣೆ..!
ನ್ಯೂಸ್ ನಾಟೌಟ್: ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಎಂಬವರು ತಮ್ಮ ಖಾಸಗಿ ಔಡಿ ಸೆಡಾನ್ ಕಾರಿಗೆ ಸೈರನ್ ಹಾಗೂ ಸರ್ಕಾರಿ ಫಲಕ ಅಳವಡಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಆರೋಪದ ಬೆನ್ನಲ್ಲೇ ಪೂಜಾ ಅವರ ನೇಮಕಾತಿ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯ ಸಂದರ್ಭದಲ್ಲಿ ಇತರ ಹಿಂದುಳಿದ ವರ್ಗಗಳ ಪ್ರಮಾಣ ಪತ್ರವನ್ನು ಪೂಜಾ ಸಲ್ಲಿಸಿರುವುದು ನಕಲಿ ಎಂಬ ಆರೋಪವೂ ಇದೀಗ ಕೇಳಿಬಂದಿದೆ. ಪೂಜಾ ಖೇಡ್ಕರ್ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ 841ನೇ ರ‍್ಯಾಂಕ್ ಪಡೆದಿದ್ದರು. ಪ್ರೊಬೇಷನರಿ ಹುದ್ದೆಯ ಅವಧಿಯಲ್ಲಿ ಇವರ ವಿರುದ್ಧ ಅಧಿಕಾರ ದುರ್ಬಳಕೆಯ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಪುಣೆಯಿಂದ ವಾಶೀಂ ಜಿಲ್ಲೆಗೆ ಸರ್ಕಾರ ವರ್ಗಾವಣೆ ಮಾಡಿದೆ. ನೇಮಕಾತಿ ಸಂದರ್ಭದಲ್ಲಿ ವಿನಾಯತಿ ಪಡೆಯಲು ನಕಲಿ ಒಬಿಸಿ ಪ್ರಮಾಣಪತ್ರದ ಜತೆಗೆ, ದೃಷ್ಟಿ ದೋಷ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯ ಪ್ರಮಾಣಪತ್ರವನ್ನೂ ಇವರು ಸಲ್ಲಿಸಿದ್ದರು ಎನ್ನಲಾಗಿದೆ. ಇವುಗಳ ಪರಿಶೀಲನೆಗೆ ದೆಹಲಿಯಲ್ಲಿರುವ ಏಮ್ಸ್‌ಗೆ ಹಾಜರಾಗಿ ಪರೀಕ್ಷೆಗೆ ಒಳಪಡುವಂತೆ ಸೂಚಿಸಲಾಗಿತ್ತು. ಆದರೆ ಕೋವಿಡ್ ನೆಪ ನೀಡಿ ಅವರು ಇದಕ್ಕೆ ಹಾಜರಾಗಲಿಲ್ಲ. ಹೀಗೆ ಐದು ಬಾರಿ ಪರೀಕ್ಷೆಗೆ ಗೈರಾಗಿದ್ದ ಪೂಜಾ, ಆರನೇ ಬಾರಿಗೆ ಪರೀಕ್ಷೆ ಎದುರಿಸಿದರು. ಆದರೆ ದೃಷ್ಟಿ ದೋಷದ ಪರೀಕ್ಷೆಗೆ ಅಗತ್ಯವಿದ್ದ ಎಂಆರ್‌ಐ ತಪಾಸಣೆಗೆ ಮತ್ತೆ ಗೈರಾದರು ಎಂದು ಅಧಿಕಾರಿಯೊಬ್ಬರು ಹೇಳಲಾಗಿದೆ. ಇದರೊಂದಿಗೆ ಪುಣೆಯ ಹೆಚ್ಚುವರಿ ಜಿಲ್ಲಾಧಿಕಾರಿ ಅಜಯ್ ಮೋರೆ ಅವರು ರಜೆಯಲ್ಲಿದ್ದಾಗ ಅವರ ಕಚೇರಿಯನ್ನು ಬಳಸಿದ ಪೂಜಾ, ಅಲ್ಲಿರುವ ಪೀಠೋಪಕರಣಗಳನ್ನು ಬದಲಿಸಲು ಸೂಚಿಸಿದ್ದರು. ಜತೆಗೆ ಲೆಟರ್‌ಹೆಡ್ ಅನ್ನು ದುರ್ಬಳಕೆ ಮಾಡಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಐಎಎಸ್ ಅಧಿಕಾರಿಯಾಗಿ ನೇಮಕಗೊಂಡ ನಂತರ ಮೊದಲ 2 ವರ್ಷ ಪ್ರೊಬೇಷನರಿ ಅವಧಿಯಲ್ಲಿ ಯಾವುದೇ ಹೆಚ್ಚುವರಿ ಸವಲತ್ತುಗಳು ಇವರಿಗೆ ಇರುವುದಿಲ್ಲ. ಹೀಗಿದ್ದರೂ ಇವರ ವರ್ತನೆಯಿಂದ ಬೇಸತ್ತಿದ್ದ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ. ಸುಹಾಸ್ ದಿವಾಸೆ ಹಾಗೂ ರಾಜ್ಯ ಮುಖ್ಯ ಆಯುಕ್ತ ಸುಜಾತಾ ಸೌನಿಕ್ ಅವರಿಗೆ ದೂರು ನೀಡಿದ್ದರು ಎನ್ನಲಾಗಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ