ಕಾರ್ಕಳ: ರಾತ್ರಿ ಬಹುಮಹಡಿ ಕಟ್ಟಡದೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟ..! ಮನೆಯ ಮೇಲ್ಭಾಗಕ್ಕೆ ಓಡಿ ಸಹಾಯಕ್ಕಾಗಿ ರಸ್ತೆಯಲ್ಲಿ ಹೋಗುವವರನ್ನು ಕರೆದ ಮನೆಯವರು..!

ನ್ಯೂಸ್‌ ನಾಟೌಟ್‌: ಬಹುಮಹಡಿ ಕಟ್ಟಡವೊಂದರ 4ನೇ ಮಹಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಬಳಿ ಶನಿವಾರ(ಜು.28) ರಾತ್ರಿ ನಡೆದಿದೆ. ಕಾರ್ಕಳ ಬೈಪಾಸ್ ಬಳಿಯ ಶ್ರೀಕೃಷ್ಣ ಎಂಕ್ಲೇವ್ ಕಟ್ಟಡದ 4ನೇ ಮಹಡಿಯಲ್ಲಿ ಸುಮಾರು 6 ಪ್ಲಾಟ್ ಗಳಿದ್ದು, ಉದಯ ಕೋಟ್ಯಾನ್ ಎಂಬವರ ಫ್ಲ್ಯಾಟ್ ನಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಹೊರಗಿಂದ ಬೆಂಕಿ ಕಾಣಿಸಿಕೊಂಡಿದೆ. ಫ್ಲ್ಯಾಟ್ ನಿಂದ ಹೊರಹೋಗಲು ಸಾಧ್ಯವಾಗದೆ, ಉದಯ ಕೋಟ್ಯಾನ್ ಎಂಬವರು ಮನೆಯ ಮೇಲ್ಭಾಗಕ್ಕೆ ಓಡಿ ಹೋಗಿ ಸಹಾಯಕ್ಕಾಗಿ ರಸ್ತೆಯಲ್ಲಿ ಹೋಗುವವರನ್ನು ಕರೆದಿದ್ದಾರೆ. ಪಕ್ಕದ ಫ್ಲ್ಯಾಟ್ ನಲ್ಲಿ ವಾಸವಾಗಿರುವ ಪುತ್ತಬ್ಬ ಎಂಬವರ ಪತ್ನಿ ,ಸೊಸೆ ಹೊಗೆ ಮತ್ತು ಬೆಂಕಿ ಕಂಡು ತೊಟ್ಟಿಲಲ್ಲಿದ್ದ ಮಗುವನ್ನು ಎತ್ತಿಕೊಂಡು ಕೆಳಗೆ ಓಡಿ ಬಂದಿದ್ದಾರೆ. ನಂತರ ಬೆಂಕಿಯ ತೀವ್ರತೆ ಹೆಚ್ಚಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು ಉದಯ ಕೋಟ್ಯಾನ್ ಮನೆಯ ಗೋಡೆ ಹಾಗೂ ಬಾಗಿಲು ಸಂಪೂರ್ಣ ನುಚ್ಚು ನೂರಾಗಿದೆ ಎಂದು ವರದಿ ತಿಳಿಸಿದೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ಬಾಗಿಲು ಒಡೆದು ಒಳಗಿರುವ ಪೀಠೋಪಕರಣಗಳು , ಬಟ್ಟೆಬರೆ, ಕಪಾಟು, ಕಿಚನ್ ನಲ್ಲಿರುವ ವಸ್ತುಗಳು ಹಾಗೂ ರೂಂನಲ್ಲಿರುವ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ, ಆದರೆ ಯಾರಿಗೂ ಪ್ರಾಣಪಾಯವಾಗಿಲ್ಲ. ಕಾರ್ಕಳ ಡಿವೈಎಸ್ಪಿ ಯವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. Click