ನ್ಯೂಸ್ ನಾಟೌಟ್: ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡ ಇಲಾಖೆ ಮಾಜಿ ಸಚಿವರಾಗಿದ್ದ ಬಿ.ನಾಗೇಂದ್ರ ಅವರನ್ನು ಈಡಿ ಬಂಧಿಸಿದ್ದು, ಜುಲೈ 18ರವರೆಗೆ ಇಡಿ ಕಸ್ಟಡಿಗೆ ನೀಡಿ ನ್ಯಾ.ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರನ್ನು ಶುಕ್ರವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದ ಈಡಿ ಅಧಿಕಾರಿಗಳು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಶನಿವಾರ ಯಲಹಂಕದಲ್ಲಿರುವ ನ್ಯಾಯಾಧೀಶರ ಮನೆಯಲ್ಲಿ ನಾಗೇಂದ್ರ ಅವರನ್ನು ಹಾಜರುಪಡಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಶುಕ್ರವಾರ ವಿಚಾರಣೆ ಸಂಬಂಧ ಎಸ್ಐಟಿ ಮುಂದೆ ಹಾಜರಾಗಿದ್ದ ದದ್ದಲ್ ನಂತರ ಬೆಂಗಳೂರಿನ ನಿವಾಸಕ್ಕೆ ಬಂದೇ ಇಲ್ಲ. ವಿಚಾರಣೆ ಸಂದರ್ಭ ತಮ್ಮನ್ನು ಬಂಧಿಸುವಂತೆ ವಿಶೇಷ ತನಿಖಾ ತಂಡದ ಬಳಿ ಶುಕ್ರವಾರ ಮನವಿ ಮಾಡಿದ್ದರು. ಈ ಮೂಲಕ ಇಡಿ ಬಂಧನದಿಂದ ತಪ್ಪಿಸಿಕೊಳ್ಳಬಹುದೆಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಎಸ್ಐಟಿ ಅವರನ್ನು ಬಂಧಿಸಿಲ್ಲ. ಇದಾದ ನಂತರ ಅವರು ಕುಟುಂಬಸ್ಥರ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.