ಎಕ್ಸ್‌ ಪ್ರೆಸ್‌ ರೈಲು ಡಿಕ್ಕಿಯಾಗಿ ಆನೆ ಸಾವು..! ನರಳಿ-ನರಳಿ ಪ್ರಾಣಬಿಟ್ಟ ಆನೆಯ ಹೃದಯವಿದ್ರಾವಕ ವಿಡಿಯೋ ಇಲ್ಲಿದೆ

ನ್ಯೂಸ್ ನಾಟೌಟ್: ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಗಂಡು ಕಾಡಾನೆ ಸ್ಥಳದಲ್ಲೇ ದಾರುಣವಾಗಿ ನರಳಿ ಸಾವನ್ನಪ್ಪಿದ ಘಟನೆ ಅಸ್ಸಾಂನ ಜಾಗಿರೋಡ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಆನೆಯ ಕೊನೆಯ ಕ್ಷಣದ ಮನಕಲಕುವ ದೃಶ್ಯಗಳನ್ನು ರೈಲಿನ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದು, ವೈರಲ್ ಆಗುತ್ತಿದೆ. ಹಿಂಡಿನಿಂದ ಬೇರ್ಪಟ್ಟ ಆನೆಗಳೆರಡು ಹಳಿ ದಾಟುತ್ತಿದ್ದಾಗ ಸಿಲ್ಚಾರ್ ಕಡೆಗೆ ಹೊರಟಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ತೆಗೇರಿಯಾ ಎಂಬಲ್ಲಿ ಡಿಕ್ಕಿ ಹೊಡೆದಿದೆ. ಇನ್ನೊಂದು ಆನೆ ಹಳಿ ದಾಟುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ತಿಳಿಸಿದೆ. ಈ ಘಟನೆ ಬುಧವಾರ(ಜುಲೈ 10) ರಂದು ನಡೆದಿದೆ. ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯರು ಮೃತದೇಹವನ್ನು ಹಳಿಯಿಂದ ತೆಗೆದ ಬಳಿಕ ರೈಲು ಸಂಚಾರ ಪುನರಾರಂಭವಾಗಿದೆ. ರೈಲು ಅಪ್ಪಳಿಸಿದ ಪರಿಣಾಮ ಆನೆಯ ಕಾಲುಗಳೇ ಮುರಿದುಹೋಗಿದ್ದು, ಕೆಲ ಹೊತ್ತು ಪರದಾಡಿ ಇನ್ನೊಂದು ಹಳಿ ದಾಟಲೂ ಸಾಧ್ಯವಾಗದೆ ಕುಸಿದು ಅಂಗಾತ ಮಲಗಿ ಪ್ರಾಣ ಬಿಟ್ಟಿದೆ.