ನ್ಯೂಸ್ ನಾಟೌಟ್: ಬೆಂಗಳೂರಿನ ರಾಜಾಜಿನಗರದಲ್ಲಿ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಹಾಕುವ ಕಾಮಗಾರಿಗೆ ಚಾಲನೆ ನೀಡುವ ವೇಳೆ, ಡಿಸಿಎಂ ಡಿಕೆ ಶಿವಕುಮಾರ್ ಧರಿಸಿದ್ದ ಶೂಗಳನ್ನೇ ಕದ್ದಿರುವ ಘಟನೆ ಜು. 15ರಂದು ಬೆಳಗ್ಗೆ ನಡೆದಿದೆ.
ಉದ್ಘಾಟನೆಯನ್ನು ರಾಜಾಜಿನಗರದ ಭಾಷ್ಯಂ ಸರ್ಕಲ್ ನಲ್ಲಿ ಚಾಲನೆ ನೀಡಲಾಯಿತು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಲ್ಲೇಶ್ವರಂ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರವು ಬೆಂಗಳೂರಿನ ಆಯ್ದ ಮುಖ್ಯರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಅಳವಡಿಸಲು ನಿರ್ಧರಿಸಿದೆ.
ವೈಟ್ ಟ್ಯಾಪಿಂಗ್ ನಿಂದಾಗಿ, ಡಾಂಬರ್ ರಸ್ತೆಗಳನ್ನು ದೀರ್ಘಕಾಲ ಬಾಳಿಕೆ ಬರುವಂಥ ರಸ್ತೆಗಳನ್ನಾಗಿ ಪರಿವರ್ತಿಸುವ ಯೋಜನೆ ಇದಾಗಿದೆ. ಕಾಮಗಾರಿ ಆರಂಭಕ್ಕಾಗಿ ಸಾಂಕೇತಿಕವಾಗಿ ಗುದ್ದಲಿ ಪೂಜೆಯನ್ನು ಗಣ್ಯರು ನೆರವೇರಿಸಲು ಮುಂದಾದಾಗ ಔಪಚಾರಿಕವಾಗಿ ಡಿಕೆಶಿ ಹಾಗೂ ಮೊದಲಾದ ಗಣ್ಯರು ತಮ್ಮ ಪಾದರಕ್ಷೆಗಳನ್ನು ಅಲ್ಲೇ ಪಕ್ಕದಲ್ಲೇ ಬಿಟ್ಟರು. ಡಿಕೆಶಿಯವರೂ ಪೂಜೆ ನಡೆಯುವ ಅನತಿ ದೂರದಲ್ಲೇ ತಮ್ಮ ಶೂಗಳನ್ನು ಕಳಚಿ, ಪೂಜೆ ನಡೆಯುವ ಜಾಗಕ್ಕೆ ಬಂದಿದ್ದರು. ಆದರೆ, ಇದೇ ಸಂದರ್ಭವನ್ನು ಬಳಸಿಕೊಂಡಿರುವ ಯಾರೋ ಖದೀಮರು ಡಿಕೆಶಿಯ ಶೂಗಳನ್ನೇ ಕದ್ದಿದ್ದಾರೆ ಎನ್ನಲಾಗಿದೆ.
ಪೂಜೆ ಮುಗಿಸಿ ಬಂದ ಡಿಕೆಶಿಗೆ ತಮ್ಮ ಶೂಗಳನ್ನು ಯಾರೋ ಎಗರಿಸಿದ್ದಾರೆ ಎಂಬುದು ತಿಳಿದಿದೆ. ಅಲ್ಲೇ ಅಕ್ಕಪಕ್ಕ ಹುಡುಕಾಡಿದರೂ ಶೂಗಳು ಸಿಕ್ಕಿಲ್ಲ. ಆಗ, ಉಪ ಮುಖ್ಯಮಂತ್ರಿಗಳು, ತಮ್ಮ ಕಾರಿನತ್ತ ತೆರಳಿ ಅದರಲ್ಲಿದ್ದ ತಮ್ಮ ಬೇರೆ ಶೂಗಳನ್ನು ಧರಿಸಿಕೊಂಡು ಪ್ರಯಾಣ ಬೆಳೆಸಿದ್ದಾರೆ.
Click 👇