ಡೆಂಗ್ಯೂಗೆ 13 ವರ್ಷದ ಬಾಲಕಿಯ ದುರಂತ ಅಂತ್ಯ..! ಹಲವು ಆಸ್ಪತ್ರೆಗಳಿಗೆ ಅಲೆದರೂ ಉಳಿಯದ ಜೀವ..!

ನ್ಯೂಸ್‌ ನಾಟೌಟ್‌: ಡೆಂಗ್ಯೂ ಜ್ವರ ಇತ್ತೀಚೆಗೆ ಮಳೆಗಾಲ ಆರಂಭದಿಂದಲೂ ತೀವ್ರವಾಗಿ ಹರಡುತ್ತಿದ್ದು, ಹಾಸನದಲ್ಲಿ ಬಾಲಕಿಯೊಬ್ಬಳನ್ನು ಬಲಿ ಪಡೆದುಕೊಂಡಿದೆ. 13 ವರ್ಷದ ಬಾಲಕಿ ಡೆಂಗ್ಯೂ ಜ್ವರದಿಂದ ಮೃತಪಟ್ಟ ಘಟನೆ ಹಾಸನ ತಾಲೂಕಿನ ಬೊಮ್ಮನಾಯಕಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಅಕ್ಷತಾ (13) ಮೃತ ಬಾಲಕಿ ಎಂದು ಗುರುತಿಸಲಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದ ಅಪ್ಪಣ್ಣ ಶೆಟ್ಟಿ ಹಾಗೂ ಪದ್ಮಾ ದಂಪತಿ ಪುತ್ರಿ ಅಕ್ಷತಾ, ಹಾಸನದ ಖಾಸಗಿ ಶಾಲೆಯಲ್ಲಿ 7 ನೇ ತರಗತಿ‌ ಓದುತ್ತಿದ್ದರು. ಕಳೆದ ಬುಧವಾರ ಜ್ವರಕ್ಕೆ ತುತ್ತಾಗಿದ್ದ ಈಕೆಗೆ ಬೊಮ್ಮನಾಯಕಹಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದಾಗ್ಯೂ ಬಾಲಕಿ ಗುಣಮುಖಳಾಗದೇ ಇದ್ದ ಕಾರಣ ಪೋಷಕರು ಆಕೆಯನ್ನ ಹಾಸನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಅಕ್ಷತಾ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಮತ್ತೊಂದು ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ. ಬಾಲಕಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗುವಂತೆ ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ನಂತರ ಪೋಷಕರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ.