ನ್ಯೂಸ್ ನಾಟೌಟ್: ಮಳೆಗಾಲ ಬಂದ್ರೆ ಸಾಕು.. ಎಲ್ಲಿ ನೋಡಿದ್ರೂ ಡೆಂಗ್ಯೂ ಜ್ವರದ್ದೇ ಮಾತು. ಈ ಡೆಂಗ್ಯೂ ಜ್ವರ ತುಂಬಾ ಅಪಾಯಕಾರಿ, ಮನುಷ್ಯನ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಈಗಾಗಲೇ ರಾಜ್ಯದ ಹಲವು ಕಡೆ ಡೆಂಗ್ಯೂ ಜ್ವರದಿಂದ ಅನೇಕರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಹಾಗಿದ್ದರೆ ಈ ಡೆಂಗ್ಯೂ ಜ್ವರ ಹೇಗೆ ಉಂಟಾಗುತ್ತದೆ. ಜ್ವರಕ್ಕೆ ಕಾರಣವಾಗೊ ಆ ಸೊಳ್ಳೆ ಅದೆಷ್ಟು ಅಪಾಯಕಾರಿ, ಇದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳೋದು ಹೇಗೆ..? ಅನ್ನೋದರ ಬಗ್ಗೆ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ಡಾ| ದಿನೇಶ್ ಪಿ ವಿ ಹಾಗೂ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ| ನಮ್ರತಾ ಕೆ. ಜಿ ದಂಪತಿ ಜಂಟಿಯಾಗಿ ಲೇಖನ ಬರೆದಿದ್ದಾರೆ. ಈ ಲೇಖನದ ಪೂರ್ಣ ಪಾಠ ಇಲ್ಲಿದೆ ಓದಿ.
ಡೆಂಗ್ಯೂ ಜ್ವರ “ಏಡಿಸ್ ಈಜಿಪ್ಟಿ” ಎಂಬ ಸೋಂಕು ಪೀಡಿತ ಹೆಣ್ಣು ಸೊಳ್ಳೆಯಿಂದ ಹರಡೊ ವೈರಸ್. ಇದು ಪ್ರಪಂಚದ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ, ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆ ಬಿಸಿಲು ಮುಂತಾದ ಹವಾಮಾನ ವೈಪರೀತ್ಯ “ಏಡಿಸ್ ಈಜಿಪ್ಟಿ” ಸೊಳ್ಳೆಯ ವಂಶಾಭಿವೃದ್ಧಿಗೆ ಸಹಾಯಕವಾಗಿದೆ ಮತ್ತು ಡೆಂಗ್ಯೂ ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿದೆ.
‘ಏಡಿಸ್ ಈಜಿಪ್ಟಿ’ ಸೊಳ್ಳೆಯು ನಿಂತ ನೀರಿನಲ್ಲಿ ಅಂದರೆ ನೀರಿನ ತೊಟ್ಟಿ, ಉಪಯೋಗಿಸಿ ಎಸೆದ ಪ್ಲಾಸ್ಟಿಕ್ ಬಾಟಲಿಗಳು, ಹೂವಿನ ಕುಂಡ, ಉಪಯೋಗಿಸಿ ಎಸೆದ ಎಳನೀರಿನ ಚಿಪ್ಪು, ತಾತ್ಕಾಲಿಕವಾಗಿ ನೀರು ಸಂಗ್ರಹವಾಗುವ ಸ್ಥಳಗಳಲ್ಲಿ ವಂಶಾಭಿವೃದ್ಧಿಯನ್ನು ಮಾಡುತ್ತದೆ. ಈ ಸೊಳ್ಳೆಯು ಸಾಮಾನ್ಯವಾಗಿ ಹಗಲು ಸಮಯದಲ್ಲಿ ಹೆಚ್ಚಾಗಿ ಕಚ್ಚುತ್ತದೆ(ಮುಂಜಾನೆ ಮತ್ತು ಮುಸ್ಸಂಜೆ). ಡೆಂಗ್ಯೂ ಜ್ವರವು ಡೆಂಗ್ಯೂ ವೈರಸ್ ಸೋಂಕಿತ ಸೊಳ್ಳೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಎಲ್ಲಾ ಡೆಂಗ್ಯೂ ಸೋಂಕು ಪೀಡಿತ ವ್ಯಕ್ತಿಗಳಲ್ಲಿ ತೀವ್ರವಾದ ರೋಗಲಕ್ಷಣ ಕಾಣಿಸಿಕೊಳ್ಳುವುದಿಲ್ಲ. ಡೆಂಗ್ಯೂ ಜ್ವರವು ಡೆಂಗ್ಯೂ ಸೋಂಕಿತ ಸೊಳ್ಳೆ ಕಚ್ಚಿದ 4-10 ದಿನಗಳ ನಂತರ ಪ್ರಾರಂಭವಾಗುತ್ತದೆ. ಡೆಂಗ್ಯೂ ಜ್ವರವು 104°F (40°C) ವರೆಗೂ ಇದ್ದು ಕೆಳಕಾಣಿಸಿದ ರೋಗಲಕ್ಷಣಗಳು ಮತ್ತು ರೋಗ ಚಹ್ನೆಗಳು ಇರುತ್ತವೆ.
ತಲೆನೋವು, ವಿಪರೀತ ಆಯಾಸ, ಮೈಕೈ, ಮಾಂಸಖಂಡ, ಮತ್ತು ಗಂಟುಗಳ ಸೆಳೆತ ಮತ್ತು ನೋವು, ವಾಕರಿಕೆ, ಕಣ್ಣುಗಳ ಹಿಂದೆ ನೋವು, ಚರ್ಮದ ದದ್ದು,ತುರಿಕೆ, ದುಗ್ಧರಸಗ್ರಂಥಿಯ ಊದುವಿಕೆ ಕಾಣುತ್ತದೆ.
ರೋಗ ಗುಣಮುಖವಾಗಲು 2 ರಿಂದ 7 ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಅಪರೂಪದ ಸಂಧರ್ಭದಲ್ಲಿ ರೋಗಲಕ್ಷಣವು ಉಲ್ಬಣಗೊಂಡು ಮಾರಣಾಂತಿಕವಾಗಬಹುದು ಇದನ್ನು ತೀವ್ರ ಡೆಂಗ್ಯೂ, ಡೆಂಗ್ಯೂ ಹೆಮರಾಜಿಕ್ ಜ್ವರ ಅಥವಾ ಡೆಂಗ್ಯೂ ಶಾಕ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಕೆಳಕಂಡ ಲಕ್ಷಣಗಳನ್ನು ಹೊಂದಿದೆ.
- ತೀವ್ರತರವಾದ ಹೊಟ್ಟೆನೋವು
- ನಿರಂತರ ವಾಂತಿ
- ವಸಡು,ಮೂಗು ಮತ್ತು ಚರ್ಮದ ಅಡಿಯಲ್ಲಿ ರಕ್ತಸ್ರಾವ
- ಮಲ,ಮೂತ್ರ ಮತ್ತು ವಾಂತಿಯಲ್ಲಿ ರಕ್ತ
- ಆಯಾಸ
- ಕಷ್ಟ ಅಥವಾ ತ್ವರಿತ ಉಸಿರಾಟ
- ಕಿರಿಕಿರಿ ಅಥವಾ ಚಡಪಡಿಕೆ
ಈ ಮೇಲ್ಕಾಣಿಸಿದ ತೊಂದರೆಗಳು ರಕ್ತಪ್ರವಾಹದಲ್ಲಿನ ಹೆಪ್ಪುಗಟ್ಟುವಿಕೆ ರೂಪಿಸುವ ಜೀವಕೋಶಗಳ ಅಂದರೆ “ರಕ್ತದ ಕಿರುಬಿಲ್ಲೆಗಳ (ಪ್ಲೇಟ್ ಲೆಟ್)” ಸಂಖ್ಯೆಯು ಕಡಿಮೆಯಾಗಿ, ರಕ್ತನಾಳಗಳು ಹಾನಿಗೊಳಗಾಗಿ ಸೋರಿಕೆಯಾಗುವುದರಿಂದ ಆಂತರಿಕ ರಕ್ತಸ್ರಾವ ಅಂಗಾಂಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.
ಡೆಂಗ್ಯೂ ರೋಗಾಣುವನ್ನು ಪತ್ತೆ ಹಚ್ಚಲು ನಿರ್ದಿಷ್ಟವಾದ ವೈರಸ್ ಪ್ರತಿಕಾಯ( NSI,IgM,IgG)ಗಳನ್ನು ಅಥವಾ ವೈರಸ್ ಆರ್ ಎನ್ ಎ(RNA) ವರ್ಧನೆಯ ಪರೀಕ್ಷೆ (RIBCR) ಸೇರಿದಂತೆ ರಕ್ತದ ಕಿರುಬಲ್ಲೆಗಳ ಮತ್ತು ಬಿಳಿರಕ್ತಕಣದ ಸಂಖ್ಯೆ ಪರೀಕ್ಷೆಗಳನ್ನು ಮಾಡಬಹುದು.
ಡೆಂಗ್ಯೂ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ ಸೌಮ್ಯವಾದ ಪ್ರಕರಣಗಳಲ್ಲಿ ರೋಗಲಕ್ಷಣಗಳನ್ನು ನಿವಾರಿಸುವಲ್ಲಿ ಚಿಕಿತ್ಸೆ ಕೇಂದ್ರೀಕೃತವಾಗಿರುತ್ತದೆ. ತೀವ್ರ ಡೆಂಗ್ಯೂ ಸೋಕಿನಿಂದ ಬಳಲುತ್ತಿರುವವರನ್ನು ಆಸ್ಪತ್ರೆಗೆ ಸೇರಿಸುವುದು ಮತ್ತು ದ್ರವ, ಪ್ಲೇಟ್ ಲೆಟ್ ಅಥವಾ ಪ್ಲಾಸ್ಮಾ ವರ್ಗಾವಣೆ ಅಭಿದಮನಿಯ ಮೂಲಕ ನೀಡುವದನ್ನು ಒಳಗೊಂಡಿರುತ್ತದೆ.
- ಸೊಳ್ಳೆ ನಿರ್ಮೂಲನೆ ಮತ್ತು ಸೊಳ್ಳೆ ಕಡಿತವನ್ನು ತಡೆಗಟ್ಟುವ ಮೂಲಕ ಡೆಂಗ್ಯೂ ಸೋಂಕನ್ನು ತಡೆಯಬಹುದು.
- ನೀರು ಮನೆಯ ಸುತ್ತಮುತ್ತ ಸಂಗ್ರಹವಾಗದಂತೆ ನೋಡಿಕೊಳ್ಳುವುದು
- ಸುಸೂತ್ರವಾದ ತ್ಯಾಜ್ಯ ವಿಲೇವಾರಿ
- ಸೊಳ್ಳೆ ಪರದೆ, ಕೈಕಾಲುಗಳಿಗೆ ಸೊಳ್ಳೆ ನಿವಾರಕ ಮತ್ತು ಕೈಕಾಲು ಮುಚ್ಚುವಂತಹ ಬಟ್ಟೆಗಳನ್ನು ಧರಿಸುವುದು.
- ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟು ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.