ನ್ಯೂಸ್ ನಾಟೌಟ್: ಮನೆಯೂಟ ಬೇಕು, ಮಲಗಲು ಹಾಸಿಗೆ ಬೇಕು ಎಂದು ಹೈಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದ ದರ್ಶನ್ (Darshan) ಪರ ವಕೀಲರು ಹಿಂದಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಈ ಬಗ್ಗೆ ಇಂದು(ಜು.29) ಕೋರ್ಟ್ ವಿಚಾರಣೆ ನಿಗದಿಯಾಗಿತ್ತು. ಅರ್ಜಿ ವಾಪಸ್ ಪಡೆದ ಕಾರಣ ದರ್ಶನ್ ಜೈಲೂಟವನ್ನೇ ಸೇವಿಸಲು ಸೂಚಿಸಲಾಗಿದೆ.
ಇಂದು(ಜು.29) ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆ ಮೆಮೋ ಸಲ್ಲಿಸಿ ಅರ್ಜಿಯನ್ನು ಹಿಂದಕ್ಕೆ ಪಡೆಯಲಾಗಿದೆ. ತಾಂತ್ರಿಕ ಕಾರಣ ನೀಡಿ ದರ್ಶನ್ ಪರ ವಕೀಲರು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದು ಮತ್ತೆ ಹೊಸ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಮನೆಯೂಟ, ಹಾಸಿಗೆ, ಪುಸ್ತಕಗಳಿಗೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಜುಲೈ 25 ರಂದು ವಜಾಗೊಳಿಸಿತ್ತು.
ಅರ್ಜಿ ವಜಾಗೊಂಡ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ದರ್ಶನ್ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು. ಕಾನೂನಿಗೆ ಎಲ್ಲರೂ ಒಂದೇ, ಕೈದಿಗಳಲ್ಲಿ ಯಾವುದೇ ಭೇದವಿಲ್ಲ. ಆಸ್ತಿ ಅಂತಸ್ತು ನೋಡಿ ಜೈಲಿನಲ್ಲಿ ಸೌಕರ್ಯ ನೀಡಲು ಸಾಧ್ಯವಿಲ್ಲ. ಅಗತ್ಯವಿದ್ದಾಗ ಮಾತ್ರ ವಿಚಾರಣಾಧೀನ ಕೈದಿಗಳಿಗೆ ಮನೆಯೂಟ ನೀಡಬಹುದು. ಆದರೆ ಕೊಲೆ ಪ್ರಕರಣದ ಆರೋಪಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಹೇಳಿತ್ತು. ಇದೇ ಮುಖಭಂಗ ಹೈಕೋರ್ಟ್ ನಲ್ಲೂ ಅಗುವ ಸಾಧ್ಯತೆ ಇದ್ದ ಕಾರಣಕ್ಕಾಗಿ ಮೇಲ್ಮನವಿ ಹಿಂಪಡೆದರೇ ಎಂಬ ಶಂಕೆ ವ್ಯಕ್ತವಾಗಿದೆ.
Click