ನ್ಯೂಸ್ ನಾಟೌಟ್: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸುವ ಮಸೂದೆಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡು ಬಳಿಕ ಡಿಲೀಟ್ ಮಾಡಿದ್ದಾರೆ. ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಿಎಂ ಕನ್ನಡಿಗರಿಗೆ ಉದ್ಯೋಗದಲ್ಲಿ ಆಧ್ಯತೆ ನೀಡುವ ನಿರ್ಧಾರಕ್ಕೆ ಉದ್ಯಮಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪರ-ವಿರೋಧ ಚರ್ಚೆಯಾಗುತ್ತಿದ್ದಂತೆಯೇ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂದೇಶವನ್ನು ಡಿಲೀಟ್ ಮಾಡಿಕೊಂಡಿದ್ದಾರೆ. ಇದಕ್ಕೆ ನಾನಾ ಪ್ರಶ್ನೆಗಳು ಹುಟ್ಟಿಕೊಂಡಿವೆ. ಉದ್ಯಮಿಗಳ ಒತ್ತಡಕ್ಕೆ ಮಣಿದು ಸಿಎಂ ಸಂದೇಶ ಡಿಲೀಟ್ ಮಾಡಿದ್ರಾ? ಅಥವಾ ಮಸೂದೆಯಲ್ಲಿರುವುದು ತಾವು ಸಾಮಾಜಿಕ ಜಾಲತಾಣದಲ್ಲಿ ಹೇಳಿರುವ ಮಾಹಿತಿ ಬೇರೆ ಬೇರೆ ಆಗಿದ್ಯಾ? ಹೀಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.
ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ “ಸಿ ಮತ್ತು ಡಿ” ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿಯನ್ನು ಕಡ್ಡಾಯಗೊಳಿಸುವ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ (ಜುಲೈ 16) ಅಧಿಕೃತವಾಗಿ ಸಾಮಾಜಿಕ ಜಾಲತಾಣ ‘X’ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದಕ್ಕೆ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಸೇರಿದಂತೆ ಕೈಗಾರಿಕೋದ್ಯಮಿಗಳ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಆ ಸಂದೇಶ ಡಿಲೀಟ್ ಮಾಡಲಾಗಿದೆ.
ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿನತ್ತ ವಲಸೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಖಾಸಗಿ ವಲಯಗಳಲ್ಲಿ ಕನ್ನಡೇತರರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಒತ್ತಾಯ ಹಲವು ವರ್ಷಗಳಿಂದ ಇದೆ. ಇದರ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳಲು ಉದ್ಯಮಿಗಳು ಬಿಡುತ್ತಿಲ್ಲವೇ ಎಂಬ ಶಂಕೆ ವ್ಯಕ್ತವಾಗಿದೆ.
Click 👇