ನ್ಯೂಸ್ ನಾಟೌಟ್: ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರನ್ನೇ ಗಾಬರಿ ಬೀಳಿಸುವ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಆತಂಕದ ಪರಿಸ್ಥಿತಿ ನಿರ್ಮಾಣವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದ ಮೇನಾಲ ಎಂಬಲ್ಲಿಂದ ವರದಿಯಾಗಿದೆ. ಮಕ್ಕಳ ಕಳ್ಳರಿದ್ದಾರೆ, ನಿಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಿ ಎಂಬ ಸಂದೇಶ ಜಾಲತಾಣದಲ್ಲಿ ಹರಿದಾಡಿದೆ. ಈ ಪೋಸ್ಟ್ ಬಾನುವಾರ(july-7) ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ತನಿಖೆ ನಡೆಸಿದ ಬಳಿಕ ಇದೊಂದು ಫೇಕ್ ನ್ಯೂಸ್ ಅನ್ನೋದು ಇದೀಗ ಬಯಲಾಗಿದೆ.
ಸುಳ್ಯ ತಾಲೂಕಿನ ಅಜ್ಜಾವರದ ಮೇನಾಲದಲ್ಲಿ ಮಕ್ಕಳ ಕಳ್ಳರು ಕಂಡು ಬಂದಿದ್ದಾರೆ. ಈ ಬಗ್ಗೆ ಬಾಲಕನೊಬ್ಬ ಮನೆಯಲ್ಲಿ ಹೇಳಿದ್ದು ಈ ಹಿನ್ನೆಲೆಯಲ್ಲಿ ಕೆಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ನಿಮ್ಮ ಮಕ್ಕಳ ರಕ್ಷಣೆ ಬಗ್ಗೆ ನಿಗಾ ವಹಿಸಿ ಅನ್ನುವಂತಹ ಸಂದೇಶ ಹರಿದಾಡಿತ್ತು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಇದೊಂದು ಗಾಳಿ ಸುದ್ದಿ ಅನ್ನುವುದು ತಿಳಿದು ಬಂದಿದೆ.
ಆರಂಭದಲ್ಲಿ ಇಂತಹ ಪೋಸ್ಟ್ ನೋಡಿ ಪೋಷಕರು ಆತಂಕಕ್ಕೆ ಈಡಾಗಿದ್ದರು. ಇದೀಗ ಪ್ರಕರಣ ಸುಖಾಂತ್ಯ ಕಂಡಿದೆ. ಅಂತಹ ಗಂಭೀರ ವಿಚಾರ ಇದ್ದರೆ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು, ಯಾವ ಪೋಸ್ಟ್ ಅನ್ನು ಕೂಡ ಸುಮ್ಮನೆ ಶೇರ್ ಮಾಡಬಾರದು ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
Click 👇