ನ್ಯೂಸ್ ನಾಟೌಟ್: ಕರಾವಳಿಯ ಜನರಿಗೆ ಯಕ್ಷಗಾನ ಎಂದರೆ ಕೇವಲ ಒಂದು ಕಲೆ ಮಾತ್ರವಲ್ಲ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದು ಭಾವನಾತ್ಮಕ ಸಂಬಂಧ.
ಹೌದು, ಮಕ್ಕಳಿಗೆ ಕಲೆ, ಆಚಾರ-ವಿಚಾರ, ನಾಟಕ ಪಾಠದ ತವರೂರಾಗಿರುವ ಸುಳ್ಯದ ರಂಗಮನೆ ಬಹುತೇಕರಿಗೆ ಚಿರಪರಿಚಿತ. ರಂಗಮನೆಗೆ ಹೋಗುವಾಗ ನಿಮ್ಮ ಕಣ್ಣಿಗೆ ಮೊದಲು ಕಾಣ ಸಿಗುವುದು 20 ವರ್ಷದ ಹಿಂದೆಯೇ ತಲೆಎತ್ತಿ ನಿಂತಿರುವ “ಮಹಿರಾವಣ” ಯಕ್ಷ ಪ್ರತಿಮೆ. ಯಕ್ಷಪ್ರೇಮಿಗಳಿಗೆ, ಪ್ರವಾಸಿಗರಿಗೆ ಇದು ಅಚ್ಚುಮೆಚ್ಚಿನಪ್ರತಿಮೆ. ಈ ಪ್ರತಿಮೆ ಧಾರಾಕಾರ ಮಳೆಗೆ ಧರೆಗುರುಳಿದೆ. ಪುತ್ಥಳಿಗೆ ಈಗ ಹಾನಿಯಾಗಿದೆ.
ಈ ಯಕ್ಷಪ್ರತಿಮೆಯನ್ನು 15-02-2004 ರಲ್ಲಿ ನಿರ್ಮಿಸಲಾಗಿತ್ತು. ಕಲಾವಿದ, ಸಾಹಿತಿ ದಿ| ಎಂ. ವಿಠಲ್ ಪುತ್ತೂರು ನಿರ್ಮಿಸಿದ್ದರು. ಚಿದಂಬರರಾವ್ ಜಂಬೆಯವರು ಲೋಕಾರ್ಪಣೆ ಮಾಡಿದ್ದರು. ಇದೀಗ ಆ ಪ್ರತಿಮೆ ಇಲ್ಲದಿರುವುದು ಕಲಾಪ್ರಿಯರಿಗೆ ಅತೀವ ನೋವು ತಂದಿದೆ. ಈ ಬಗ್ಗೆ ರಂಗಮನೆಯ ನಿರ್ದೇಶಕ, ಹಿರಿಯ ಕಲಾವಿದ ಜೀವನ್ ರಾಂ ಸುಳ್ಯ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ನೋವಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅದರ ಪೂರ್ಣ ಪಾಠವನ್ನು ಯಥಾವತ್ ಪ್ರಕಟಿಸಿದ್ದೇವೆ. ಓದಿಕೊಳ್ಳಿ..
ಫೇಸ್ ಬುಕ್ ಪುಟದಲ್ಲಿ ಬರೆದದ್ದೇನು..?
ಯಕ್ಷದ್ರೋಣ ಬಣ್ಣದ ಮಾಲಿಂಗರ ನೆನಪಿನ 15 ಅಡಿ ಎತ್ತರದ ಯಕ್ಷಪ್ರತಿಮೆ ಧಾರಾಕಾರ ಮಳೆಗೆ ಧರೆಗುರುಳಿದೆ. ಯಕ್ಷರಂಗದ ಮೊದಲ ಬಣ್ಣದ ವೇಷದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಯಕ್ಷಪ್ರತಿಮೆಯನ್ನು 15-02-2004 ರಂದು ಗುರುಗಳಾದ ಚಿದಂಬರರಾವ್ ಜಂಬೆಯವರು ಲೋಕಾರ್ಪಣೆ ಮಾಡಿದ್ದರು. 20 ವರ್ಷ ತಲೆಎತ್ತಿ ನಿಂತಿದ್ದ “ಮಹಿರಾವಣ” ಯಕ್ಷಪ್ರೇಮಿಗಳ, ಪ್ರವಾಸಿಗರ ಅತಿ ಪ್ರೀತಿಯ ಪ್ರತಿಮೆಯಾಗಿತ್ತು. ಕಲಾವಿದ,ಸಾಹಿತಿ ದಿ| ಎಂ. ವಿಠಲ್ ಪುತ್ತೂರು ಇದನ್ನು ನಿರ್ಮಿಸಿದ್ದರು. ನನ್ನ ತಂದೆ ಸುಜನಾ ಸುಳ್ಯರು ಈ ಪ್ರತಿಮೆಯ ಜೊತೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡವರು. ಕಟೀಲು ಮೇಳದಲ್ಲಿ ಹನ್ನೊಂದು ವರ್ಷ ಮಾಲಿಂಗಜ್ಜನ ಜೊತೆಯಾಗಿ ವೇಷ ಕಟ್ಟಿದವರು…..ಪ್ರತಿಮೆ ಉರುಳಿದಾಗ ಅತ್ತೇ ಬಿಟ್ಟರು. 20 ವರ್ಷದಿಂದ ರಂಗಮನೆಯ ಬಾಗಿಲಲ್ಲೇ ನಿಂತು ಎಲ್ಲರನ್ನೂ ಸ್ವಾಗತಿಸುತ್ತಿದ್ದ ಯಕ್ಷ ಪ್ರತಿಮೆಯ ಜಾಗ ಒಮ್ಮೆಲೆ ಖಾಲಿಯಾಗಿತ್ತು. ವಿಷಯ ತಿಳಿದ ತಕ್ಷಣ ನೂರಾರು ಜನ ಬೇಸರಪಟ್ಟರು. ಪ್ರತಿಮೆಯ ಎದುರು ತಾವು ತೆಗೆಸಿಕೊಂಡ ಫೋಟೋವನ್ನು ನನಗೆ ಕಳಿಸಿ ನೆನಪುಗಳನ್ನು ಮರುಕಳಿಸಿಕೊಂಡ್ರು. ಆ ಜಾಗ ಖಾಲಿಯಾಗಿ ಇರಬಾರದು ಅನಿಸಿತು..ಕೂಡಲೇ ಅದೇ ಸ್ಥಳದಲ್ಲಿ ಮತ್ತೆ ಮರು ನಿರ್ಮಾಣಕ್ಕೆ ನಿರ್ಧರಿಸಿದೆ. ಆತ್ಮೀಯರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಕಸ್ತೂರಿ ನರ್ಸರಿಯ ಮಧುಸೂದನ್ ಮತ್ತು ಲತಾಮಧುಸೂಧನ್ ರವರು ಹತ್ತು ಚೀಲ ಸಿಮೆಂಟ್ ನ್ನು, ಶಿಷ್ಯ ಶಿಶಿರ ಕಲ್ಕೂರ ಒಂದು ಲೋಡ್ ಹೊಯ್ಗೆಯನ್ನು ಪ್ರಾಯೋಜಿಸುವ ಮೂಲಕ ಆರಂಭದಲ್ಲೇ ನನಗೆ ಧೈರ್ಯ ತುಂಬಿದ್ರು. ಪಿ.ಬಿ.ದಿವಾಕರ ರೈ, ಪಿ.ಬಿ.ಸುಧಾಕರ ರೈ ಸಹೋದರರು ಸೇರಿದಂತೆ ರಂಗಮನೆಯ ಅನೇಕ ಹಿತೈಷಿಗಳು ತಮ್ಮಿಂದಾದ ಸಹಾಯ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ಇವರೆಲ್ಲರಿಗೂ ನಾನು ಚಿರಋಣಿ. ಸ್ವಲ್ಪ ದೊಡ್ಡ ಮೊತ್ತದ ನಷ್ಟವೇ ಆಗಿದೆ. ಮೊತ್ತಕ್ಕಿಂತಲೂ ಬಣ್ಣದ ಮಾಲಿಂಗಜ್ಜನ ಬಗೆಗಿನ ಪ್ರೀತಿ,ಗೌರವ ಮತ್ತು ಒಬ್ಬ ಕಲಾವಿದನಿಗೆ ಇರಲೇಬೇಕಾದ ಬಣ್ಣದ ವೇಷದ ಹಿಂದಿರುವ ತಾಳ್ಮೆ, ಶ್ರದ್ಧೆ, ಜ್ಞಾನ, ಕಲೆ ಎಲ್ಲವೂ ಸದಾ ರಂಗಮನೆ ಅಂಗಳದಲ್ಲಿ ಹಸಿರಾಗಿರಬೇಕು ಅನ್ನುವ ಕಾರಣಕ್ಕೆ ಮರುನಿರ್ಮಾಣದ ಕೆಲಸ ತಕ್ಷಣ ಆರಂಭಿಸಿದ್ದೇನೆ. ಕುಂಬಳೆಯ ಪ್ರಸಿದ್ಧ ಕಲಾವಿದ ಶ್ರೀ ವೇಣುಗೋಪಾಲ ಆಚಾರ್ಯರು ಪ್ರತಿಮೆಯ ಶಿಲ್ಪಿಯಾಗಿದ್ದಾರೆ. ಇನ್ನಷ್ಟು ಭದ್ರವಾಗಿ ಪೌಂಡೇಶನ್, ಪಿಲ್ಲರ್ ಹಾಕಲಾಗಿದೆ. ಇನ್ನೆರಡು ತಿಂಗಳಲ್ಲಿ “ಮಹಿರಾವಣ” ನಿಮ್ಮೆದುರು ಹೊಸರೂಪದಲ್ಲಿ ಕಾಣಿಸಿಕೊಳ್ಳಲಿದೆ. ನೆರವು ನೀಡುವ ಮನವುಳ್ಳವರಿಗೆ ಸ್ವಾಗತ. 9448215946