ನ್ಯೂಸ್ ನಾಟೌಟ್: ಯೋಗವೆಂದರೆ ಕೇವಲ ಆಸನಗಳಲ್ಲ. ಅಹಿಂಸೆ, ಪರಮಾತ್ಮನಲ್ಲಿ ಶರಣಾಗತಿಗಳೂ ಸೇರಿವೆ. ಯೋಗ ಮತ್ತು ಆಯುರ್ವೇದ ವಿಚಾರದ ಸೇವೆಗಳಿಗೆ ನಮ್ಮ ಸಂಸ್ಥೆ ಬದ್ಧವಾಗಿದೆ. ಪುತ್ತೂರಿನ ನರಿಮೊಗರು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಖ್ಯಾತ ಆಯುರ್ವೇದ ತಜ್ಞ ವೈದ್ಯ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅಭಿಪ್ರಾಯಪಟ್ಟರು.
ಯೋಗ ದಿನಾಚರಣೆಯ ಅಂಗವಾಗಿ ಶುಕ್ರವಾರ (ಜೂನ್ 21 ) ಪುತ್ತೂರಿನ ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ ನಲ್ಲಿ ಆಯೋಜಿಸಿದ “ಯೋಗ ಉತ್ಸವ ” ಕಾರ್ಯಕ್ರಮದಲ್ಲಿ ‘ಮನಸ್ಸು ಮತ್ತು ಯೋಗ ಮಾರ್ಗ, ಲಾಭೋಪಾಯ’ ಎಂಬ ವಿಷಯದ ಕುರಿತು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯಾ ಬ್ಯಾಂಕ್ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹಾಗೂ ರೋಟರಿಯನ್ ಎ . ಜಗಜೀವನ್ ದಾಸ್ ರೈ ಮಾತನಾಡಿ, ಡಾ . ಬಂಗಾರಡ್ಕ ಅವರ ಪರಿಣಾಮಕಾರಿ ಆರೋಗ್ಯ ಕುರಿತ ಲೇಖನಗಳು ಸಮಾಜದಲ್ಲಿ ಪರಿವರ್ತನೆ ತರುತ್ತಿವೆ ಎಂದರು.
ಅಂತಾರಾಷ್ಟ್ರೀಯ ಯೋಗಪಟು ತೃಪ್ತಿ ಎನ್ . ಅವರಿಂದ ಯೋಗಾಸನ ಪ್ರದರ್ಶನ ಪ್ರಾತ್ಯಕ್ಷಿಕೆ ನಡೆಯಿತು. ಧನ್ವಂತರಿ ಸುಳಾದಿ, ಭಜನೆಯನ್ನು ಸುಧೀಕ್ಷಾ ಹಾಗೂ ಸುನಿಧಿ, ಕಾಂಚನಮಾಲಾ ಸಿಂಧೂರ ಮನೆ, ಗೀತಾ ಸದಾಶಿವ ಭಟ್ ನವಚೇತನ ನಡೆಸಿಕೊಟ್ಟರು . ದೇವಕಿ ಭಟ್, ಭಾರತಿ ಭಜನೆಯಲ್ಲಿ ಸಹಕರಿಸಿದರು. ಆಸ್ಪತ್ರೆಯ ವ್ಯವಸ್ಥಾಪನಾ ನಿರ್ದೇಶಕಿ ಡಾ. ಶ್ರುತಿ.ಎಂ. ಎಸ್. ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಆಡಳಿತ ಸಮಿತಿ ಸದಸ್ಯ ಎಂ.ಸುಬ್ರಮಣ್ಯ ಭಟ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಧನಂಜಯ ಭಟ್ ವಂದಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ , ಉಡುಪಿ ಮಿಲಾಗ್ರಿಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಹರಿಣಾಕ್ಷಿ ಕೇವಳ, ನಿವೃತ್ತ ಪ್ರಾಧಾಪಕರಾದ ರಾಜಾರಾಮ ನೆಲ್ಲಿತ್ತಾಯ, ಸದಾಶಿವ ಭಟ್ ನವಚೇತನ, ಯೋಗ ಶಿಕ್ಷಕ ನವೀನ್ ಕೆಯ್ಯೂರು ಉಪಸ್ಥಿತರಿದ್ದರು.