ನ್ಯೂಸ್ ನಾಟೌಟ್: ಜಗತ್ತಿನ ಯಾವ ರಾಷ್ಟ್ರದಲ್ಲೇ ಇರಲಿ, ತುಳು ಎಂದಾಕ್ಷಣ ಬಡವ-ಶ್ರೀಮಂತ ಎಂಬ ಬೇಧಭಾವ ಮರೆತು ತುಳುವರು ಒಂದಾಗ್ತಾರೆ ಅನ್ನುವ ಮಾತಿದೆ. ಈ ಮಾತು ನಿಜ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ಜೂ.21ರಂದು ಆಚರಿಸಲಾದ ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಜೂ. 16 ಭಾನುವಾರ ಸಿಂಗಾಪುರದಲ್ಲಿ ನೆಲೆಸಿರುವ ತುಳು ಸಮುದಾಯದವರೆಲ್ಲರು ಒಂದು ಕಡೆ ಸೇರಿ ಯೋಗ ದಿನಾಚರಣೆಯನ್ನು ಆಚರಿಸಿದರು. ಇಲ್ಲಿನ ಈಸ್ಟ್ ಕೋಸ್ಟ್ ಕಡಲ ತೀರದಲ್ಲಿ ನೆಲೆಸಿರುವ ತುಳು ಸಮುದಾಯದ ಸದಸ್ಯರು ವಾರಾಂತ್ಯದಲ್ಲಿ ಒಂದು ದಿನ ವಿಹಾರಕ್ಕೆ, ಯೋಗ ಹಾಗೂ ತುಳು ಸ್ನೇಹ ಸಮ್ಮಿಲನಕ್ಕಾಗಿ ಮೀಸಲಿಟ್ಟರು. ಈ ಕಾರ್ಯಕ್ರಮದ ಸಂಯೋಜನೆಯನ್ನ ರಾಜೇಶ್ ಆಚಾರ್ಯ ನಿರ್ವಹಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ಯೋಗ ತರಬೇತುದಾರರಾಗಿ ಮಿಲಿಂದ್ ಸತ್ತೂರ್ ಆಗಮಿಸಿದ್ದರು. ಎಲ್ಲರಿಗೂ ಯೋಗಾಭ್ಯಾಸದ ತರಬೇತಿಯನ್ನು ನಡೆಸಿದರು. ಯೋಗದ ಮಹತ್ವವನ್ನು ವಿವರಿಸಿದರು. ಸಿಂಗಾಪುರದ ಸ್ಥಳೀಯ ಉದ್ಯಾನವನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷ ಎಂದರೆ ತುಳು ಸಮುದಾಯದಿಂದ ಇದು ಮೊದಲ ಯೋಗ ದಿನಾಚರಣೆಯಾಗಿದೆ.
ಯೋಗ ಕಾರ್ಯಕ್ರಮದ ಬಳಿಕ ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು. ಬಳಿಕ ಕರಾವಳಿಯ ರುಚಿರುಚಿಯಾದ ತಿಂಡಿ-ತಿನಿಸು ಸವಿಯಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.