ನ್ಯೂಸ್ ನಾಟೌಟ್: ಇಂತಹ ಸಮಯದಲ್ಲೇ ಸಾವು ಬರುತ್ತದೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ. ಭೂಮಿಯ ಋಣ ತೀರಿದರೆ ಯಾವುದೇ ಸಂದರ್ಭದಲ್ಲೂ ಕೂಡ ಮನುಷ್ಯನ ಬದುಕು ಕೊನೆಯಾಗಬಹುದು. ಇದಕ್ಕೆ ತಾಜಾ ಉದಾಹರಣೆಯೆಂದರೆ ಡ್ಯಾನ್ಸರ್ ವೊಬ್ಬರ ಸಾವು.
ಅವರ ಹೆಸರು ಬಲ್ವಿಂದರ್ ಸಿಂಗ್ ಛಾವ್ರಾ ಅಂತ. ಅವರು ಇಂದೋರ್ ನಲ್ಲಿ ಶುಕ್ರವಾರ ದೇಶ ಭಕ್ತಿಗೀತೆ ಹಾಡಿಗೆ ರಾಷ್ಟ್ರ ಧ್ವಜವನ್ನು ಹಿಡಿದು ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ನಗರದ ಫುಟಿ ಕೋಠಿ ಪ್ರದೇಶದ ಅಗ್ರಸೇನ್ ಧಾಮ್ನಲ್ಲಿ ಆಸ್ತಾ ಯೋಗ ಕ್ರಾಂತಿ ಅಭಿಯಾನ ಎಂಬ ಗುಂಪಿನಿಂದ ಉಚಿತ ಯೋಗ ಶಿಬಿರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಲ್ವಿಂದರ್ ಅವರನ್ನು ಕರೆಯಲಾಗಿತ್ತು. ಬಲ್ವಿಂದರ್ ಹಲವು ಕಾರ್ಯಕ್ರಮಗಳಿಗೆ ಸಾಂಸ್ಕೃತಿಕವಾಗಿ ಮನರಂಜನೆ ನೀಡಲು ಹೋಗುತ್ತಾರೆ. ಹಾಗಾಗಿ ಈ ಯೋಗ ಶಿಬಿರಕ್ಕೆ ಅವರನ್ನು ಕರೆಯಲಾಗಿತ್ತು ಎಂದು ವರದಿ ತಿಳಿಸಿದೆ.
ವೇದಿಕೆಯಲ್ಲಿ ಬಲ್ವಿಂದರ್ ಯೋಧನ ಸಮವಸ್ತ್ರವನ್ನು ಧರಿಸಿ ದೇಶಭಕ್ತಿ ಗೀತೆ ‘ಮಾ ತುಜೆ ಸಲಾಮ್’ ಹಾಡಿಗೆ ರಾಷ್ಟ್ರ ಧ್ವಜವನ್ನು ಹಿಡಿದು ನೆರೆದಿದ್ದ ಜನರತ್ತ ಕೈ ಬೀಸುತ್ತಿದ್ದರು. ದೇಶ ಭಕ್ತಿಯ ಹಾಡಿಗೆ ನೃತ್ಯ ಮಾಡುತ್ತಿದ್ದ ಬಲ್ವಿಂದರ್ ಇದ್ದಕ್ಕಿದ್ದಂತೆ ಸ್ವಲ್ಪ ಕುಸಿದು ಬೀಳುವಂತೆ ಆಗಿದ್ದಾರೆ. ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿಯುತ್ತಲೇ ಬಲ್ವಿಂದರ್ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ಆದರೆ ಅವರು ಕುಸಿದು ಬಿದ್ದಿರುವುದು ನೃತ್ಯದ ಒಂದು ಭಾಗವೆಂದುಕೊಂಡಿದ್ದ ಅಲ್ಲಿರುವ ಜನರು ಚಪ್ಪಾಳೆಯನ್ನು ತಟ್ಟುತ್ತಲೇ ಇದ್ದರು.
ಆದರೆ ಇದಾದ ಕೆಲ ಸಮಯದ ಬಳಿಕ ಬಲ್ವಿಂದರ್ ಅವರಿಗೆ ಹೃದಯಾಘಾತವಾಗಿರುವುದು ಗೊತ್ತಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಆದರೆ ಆದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಬಲ್ವಿಂದರ್ ಈ ಹಿಂದೆ 2008 ರಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು.