ನ್ಯೂಸ್ ನಾಟೌಟ್ : ಉತ್ತರಾಖಂಡದ (Uttarakhand) ಸಹಸ್ರತಾಲ್ಗೆ ಚಾರಣಕ್ಕೆ ಹೋಗಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 9 ಚಾರಣಿಗರು ಸಾವಿಗೀಡಾಗಿದ್ದರು. ಇನ್ನುಳಿದ 13 ಮಂದಿಯನ್ನು ರಕ್ಷಿಸಲಾಗಿದೆ. ಉಳಿದ ಎಲ್ಲರೂ ಇಂದು(ಜೂ.7) ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ ಎಂದು ವರದಿ ತಿಳಿಸಿದೆ. ರಕ್ಷಿಸಲ್ಪಟ್ಟ ಚಾರಣಿಗರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಸಚಿವ ಕೃಷ್ಣಬೈರೇಗೌಡ ಜೊತೆಗೆ ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ. ಸಾವಿನ ಕೂಪದಂತಿದ್ದ ಸಹಸ್ರತಾಲ್ನ ಹಿಮದ ಹೊದಿಕೆಯಿಂದ ಮತ್ತು ತೀವ್ರ ಚಳಿ ಗಾಳಿಯಿಂದ ಬಚಾವಾಗಿ ಸಿಲಿಕಾನ್ ಸಿಟಿಗೆ ಚಾರಣಿಗರು ತಲುಪಿದ್ದಾರೆ. ರಾಜ್ಯದ 21 ಚಾರಣಿಗರು ಹಾಗೂ ಓರ್ವ ಗೈಡರ್ ಒಳಗೊಂಡ ತಂಡವು ಮೇ 28 ರಂದು ಟ್ರೆಕ್ಕಿಂಗ್ಗೆ ಉತ್ತಾರಖಂಡಕ್ಕೆ ಹೋಗಿತ್ತು. ಉತ್ತರಾಕಾಶಿಯಿಂದ 35 ಕಿಮೀ ದೂರದ ಅತ್ಯಂತ ಕಠಿಣ ಹಾದಿಯ ಸಹಸ್ರತಾಲ್ ಮಯಳಿ ಎಂಬ ಎತ್ತರದ ಪ್ರದೇಶದಲ್ಲಿ ಜೂ.4 ರಂದು ಬೆಳಗ್ಗೆ ಚಾರಣ ಆರಂಭಿಸಿದ್ದರು.
ಚಾರಣದ ಗಮ್ಯಸ್ಥಾನ ತಲುಪಿ ನಂತರ ಶಿಬಿರಕ್ಕೆ ವಾಪಸ್ ಆಗುತ್ತಿದ್ದಾಗ ಮಧ್ಯಾಹ್ನದ ಹೊತ್ತಿಗೆ ಹಿಮಗಾಳಿ ಮತ್ತು ಹಿಮ ಮಿಶ್ರಿತ ಮಣ್ಣಿನ ಕುಸಿತದಿಂದಾಗಿ ಚಾರಣಿಗರು ಅಪಾಯಕ್ಕೆ ಸಿಲುಕಿದ್ದರು. ಭೀಕರ ಹಿಮಗಾಳಿಯಿಂದಾಗಿ ಕರ್ನಾಟಕದ 9 ಚಾರಣಿಗರು ದಾರುಣ ಸಾವನ್ನಪ್ಪಿದ್ದಾರೆ. ಉಳಿದ ಚಾರಣಿಗರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಕ್ಕೆ ನೆರವಾಗಲು ಕರ್ನಾಟಕದ ಸಚಿವ ಕೃಷ್ಣಬೈರೇಗೌಡ ಕೂಡ ಉತ್ತರಾಖಂಡಕ್ಕೆ ತೆರಳಿದ್ದರು.
Click 👇