ಉಪ್ಪಿನಂಗಡಿ: ನೇತ್ರಾವತಿ ನದಿಗೆ ಹಾರಲು ಯತ್ನಿಸುತ್ತಿದ್ದ ಮಹಿಳೆಯ ಜೀವ ಉಳಿಸಿದ್ದೇಗೆ ಶ್ವಾನ..? ರಾತ್ರೋರಾತ್ರಿ ಮನೆ ಬಿಟ್ಟು 4 ಕಿ.ಮೀ ನಡೆದು ಬಂದಿದ್ದ ಮಹಿಳೆ..!

ನ್ಯೂಸ್ ನಾಟೌಟ್ : ನಿಯತ್ತು, ನಿಷ್ಠೆಗೆ ಮತ್ತೊಂದು ಹೆಸರೇ ಶ್ವಾನ, ಪತಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಬಂದ ಮಹಿಳೆ ಉಪ್ಪಿನಂಗಡಿಯ ನೇತ್ರಾವತಿ ನದಿಯ ತಡೆಗೋಡೆ ಏರಿ ನದಿಗೆ ಹಾರಲು ಮುಂದಾಗಿದ್ದರು. ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಜೀವ ಉಳಿಸಿದೆ. ಪಿಲಿಗೋಡು ನಿವಾಸಿಯಾಗಿದ್ದ ಮಹಿಳೆಯೋರ್ವರು ಪತಿಯೊಂದಿಗೆ ಜಗಳವಾಡಿದ್ದಾರೆ. ಇಬ್ಬರ ನಡವೆ ಮನಸ್ತಾಪ ಉಂಟಾಗಿದೆ. ಇದೇ ಬೇಸರದಲ್ಲಿ ರಾತ್ರೋರಾತ್ರಿ ಮನೆ ಬಿಟ್ಟು ಹೊರಟ ಮಹಿಳೆ 4 ಕಿಮೀ ನಡೆದುಕೊಂಡು ಬಂದು ನೇತ್ರಾವತಿ ಸೇತುವೆ ಬಳಿ ಬಂದಿದ್ದಾರೆ. ತಡೆಗೋಡೆ ಏರಿ ಇನ್ನೇನು ನದಿಗೆ ಹಾರಬೇಕು ಎನ್ನುವಾಗ ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದ ಶ್ವಾನ ಅವರ ಚೂಡಿದಾರವನ್ನು ಕಚ್ಚಿ ಹಿಡಿದು ತಡೆದಿದೆ. ಜೋರಾಗಿ ಬೊಳಗುತ್ತಾ ರಸ್ತೆಯಲ್ಲಿ ಓಡಾಡುವವರ ಗಮನ ಸೆಳೆಯಲು ಯತ್ನಿಸುತ್ತಿತ್ತು. ಅದೃಷ್ಟವಶಾತ್ ಇದೇ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವರು ಇದನ್ನ ಗಮನಿಸಿ ಸಹಾಯಕ್ಕೆ ಮುಂದಾಗಿದ್ದಾರೆ. ಕೂಡಲೇ ಒಂದಷ್ಟು ಮಂದಿ ಸ್ಥಳಕ್ಕೆ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಬೆಂಗಳೂರು ಮೂಲದ ಈ ಮಹಿಳೆ ತನ್ನ ಸಹೋದ್ಯೋಗಿಯಾಗಿದ್ದ ಪಿಲಿಗೋಡಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಊರಿನಲ್ಲಿಯೇ ವರ್ಷದ ಹಿಂದೆ ಮನೆ ಕಟ್ಟಿಕೊಂಡು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಪತಿ ಮೆಕಾನಿಕ್ ಕೆಲಸ ಮಾಡುತ್ತಿದ್ದು, ಇಬ್ಬರ ನಡುವೆ ಆಗಾಗ ಮನಸ್ತಾಪ ಬರುತ್ತಿತ್ತು ಎನ್ನಲಾಗಿದೆ. ನಿನ್ನೆ ಜಗಳ ತೀವ್ರ ಸ್ವರೂಪಕ್ಕೆ ತಿರುಗಿ ಜೀವನವನ್ನೇ ಮುಗಿಸಿಕೊಳ್ಳುವ ಹಂತಕ್ಕೆ ಹೋಗಿದ್ದರು. ಅದೃಷ್ಟವಶಾತ್ ಶ್ವಾನದ ಸಮಯಪ್ರಜ್ಞೆಯಿಂದ ಜೀವ ಉಳಿದಿದೆ. Click 👇