ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಮಾದಕ ವಸ್ತುಗಳ ದಾಸರಾಗಿ ದಾರಿ ತಪ್ಪುತ್ತಿದ್ದಾರೆ. ಕೆಟ್ಟ ಚಟಗಳಿಂದ ಸಮಾಜದಲ್ಲಿ ಯುವ ಶಕ್ತಿ ಅಶಕ್ತವಾಗುತ್ತಿದೆ. ಎಷ್ಟೇ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ ನಿಯಂತ್ರಣಕ್ಕೆ ಸಿಗದೆ ಸಮಾಜ ಹಾದಿ ತಪ್ಪುವಂತಾಗಿದೆ. ಇಂದು (ಜೂನ್ 26) ಅಂತಾರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ತಡೆಗಟ್ಟುವ ದಿನವನ್ನಾಗಿ ಆಚರಿಸಲಾಗುತ್ತದೆ. ಮಾದಕ ವಸ್ತು ಬಳಕೆ ಮತ್ತು ಅದರ ಅಕ್ರಮ ವ್ಯಾಪಾರದ ಅಪಾಯಗಳ ಬಗ್ಗೆ ಅರಿವು ಮೂಡಿಸಲು ಪ್ರಪಂಚದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಡ್ರಗ್ಸ್, ಮಾದಕ ದ್ರವ್ಯ ಸೇವನೆಯು ಜನರ ಆರೋಗ್ಯ ಮತ್ತು ಯೋಗ ಕ್ಷೇಮದ ಮೇಲೆ ಗಂಭೀರವಾದ ಅಡ್ಡ ಪರಿಣಾಮವಗಳನ್ನು ಬೀರುತ್ತದೆ. ಮಾನವ ಸಂಕಷ್ಟಕ್ಕೆ ಕಾರಣವಾಗುತ್ತದೆ. ಈ ಡ್ರಗ್ಸ್ ಅಥವಾ ಮಾದಕ ವಸ್ತು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ. ಒಂದು ಸಲ ಈ ದುಶ್ಚಟಗಳ ಬಲೆಗೆ ಬಿದ್ದರೆ ಮತ್ತೆ ಅವರು ಮೇಲೆ ಏಳುವುದು ಕಷ್ಟವಾಗುತ್ತದೆ. ಸಂಪೂರ್ಣವಾಗಿ ಬದುಕು ಕತ್ತಲಾಗಿ ಬಿಡುತ್ತದೆ.
ಇಂತಹ ದುಶ್ಚಟಗಳ ದಾಸರಾಗುವುದನ್ನು ಮೊದಲು ತಪ್ಪಿಸಬೇಕಿದೆ. ಸ್ಥಳೀಯ ಮಟ್ಟದಲ್ಲಿ ಶಾಲಾ – ಕಾಲೇಜುಗಳಲ್ಲಿ ಮೊದಲನೆಯದಾಗಿ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಬೇಕಿದೆ. ನಮ್ಮ ಮಕ್ಕಳ ಮೇಲೆ ಒಂದು ನಿಗಾ ಇಡುವುದರ ಮೂಲಕ ಮನೆಯವರು, ಪೋಷಕರು ಕೆಲಸವನ್ನು ಮಾಡಬೇಕಾಗುತ್ತದೆ. ಎಲ್ಲರು ಒಟ್ಟಾಗಿ ನಿಂತು ಹೋರಾಡಿದರೆ ಈ ಪಿಡುಗನ್ನು ಓಡಿಸಬಹುದಾಗಿದೆ. ಸ್ವಸ್ಥ ಸಮಾಜದ ನಿರ್ಮಾಣ ನಮ್ಮ ಗುರಿಯಾಗಬೇಕು.
ಮಾದಕ ವಸ್ತುಗಳು ಅಥವಾ ಡ್ರಗ್ಸ್ ಸೇವನೆಯಿಂದ ಒಬ್ಬ ವ್ಯಕ್ತಿಯ ಆಯಸ್ಸು ಕಡಿಮೆ ಆಗಬಹುದು. ಸಣ್ಣ ವಯಸ್ಸಿಗೆ ಮಾರಕ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಹೃದಯ ರೋಗ ಮತ್ತು ಸ್ಟ್ರೋಕ್ , ಶ್ವಾಸ ಕೋಶದ ಕ್ಯಾನ್ಸರ್, ಹೆಚ್ ಐ ವಿ ಅಪಾಯ, ಮೂತ್ರಪಿಂಡದ ಕಾಯಿಲೆಗಳು, ಬಾಯಿ ಕ್ಯಾನ್ಸರ್, ರಕ್ತ ಕ್ಯಾನ್ಸರ್/ಲ್ಯುಕೇಮಿಯಾ, ತೀವ್ರ ತೂಕ ನಷ್ಟ ಉಂಟಾಗುತ್ತದೆ. ಉಳಿದಂತೆ ದೇಹದ ಮೇಲೆ ಅಲ್ಲದೆ ಮನಸ್ಸಿನ ಮೇಲೂ ಮಾದಕ ದ್ರವ್ಯ ಸೇವನೆ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತದೆ. ಖಿನ್ನತೆ, ಕಲಿಕೆ/ನೆನಪಿನ ಸಮಸ್ಯೆಗಳು, ನಿದ್ರಾಹೀನತೆ, ಹಿಂಸಾತ್ಮಕ ನಡವಳಿಕೆಗಳಿಗೂ ಪ್ರೇರೇಪಿಸಬಹುದು.
ಒಟ್ಟಿನಲ್ಲಿ ಸಮಾಜದ ಹಿತ ನಮ್ಮೆಲ್ಲರ ಹೊಣೆಯಾಗಿದೆ. ದುಶ್ಚಟಗಳಿಂದ ದೂರವಿರಿ ಎಂದು ವಿದ್ಯಾವಂತ ಯುವ ಜನತೆಗೆ ನಾವು ಹೇಳಬಹುದು. ಈ ಮಾತನ್ನು ಗಂಭೀರವಾಗಿ ತೆಗೆದುಕೊಂಡು ನಿಮ್ಮ ಸುಂದರ ಜೀವನವನ್ನು ನೀವು ರೂಪಿಸಿಕೊಳ್ಳಬೇಕಿದೆ. ಎಚ್ಚರಿಕೆ ವಹಿಸಿ.