ನ್ಯೂಸ್ ನಾಟೌಟ್: ಕಳ್ಳತನ ಮಾಡೋಕೆ ಮನೆಗೆ ನುಗ್ಗಿದ ಕಳ್ಳನೊಬ್ಬ ಎಸಿ ಕೆಳಗೆ ಮಲಗಿ ಗಡದ್ ನಿದ್ರೆ ಮಾಡಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಇಲ್ಲಿನ ಇಂದಿರಾನಗರದ ಸೆಕ್ಟರ್ 20ರಲ್ಲಿರುವ ಡಾ. ಸುನಿಲ್ ಪಾಂಡೆ ಎಂಬುವವರ ಮನೆಗೆ ಕಳ್ಳ ನುಗ್ಗಿದ್ದಾನೆ.
ಬೀಗ ಒಡೆದು ಪಾತ್ರೆ ಹಾಗೂ ಇತರೆ ವಸ್ತುಗಳನ್ನು ತೆಗೆದುಕೊಂಡು ಚೀಲಕ್ಕೆ ತುಂಬಿದ್ದಾನೆ. ಹೀಗೆ ಕದ್ದು ಇನ್ನೇನು ಅಲ್ಲಿಂದ ತೆರಳಬೇಕು ಅನ್ನುವಷ್ಟರಲ್ಲಿ ಎಸಿಯಿಂದ ಹೊರಬರುತ್ತಿದ್ದ ತಣ್ಣನೆಯ ಗಾಳಿ ಆತನನ್ನು ಜೋರಾಗಿ ನಿದ್ರೆಗೆ ಜಾರುವಂತೆ ಮಾಡಿದೆ. ಇತ್ತ ಅಕ್ಕಪಕ್ಕದ ಮನೆಯವರು ಬೀಗ ಒಡೆದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಆತನ ಎದುರು ಕುಳಿತರೂ ಕಳ್ಳನಿಗೆ ಎಚ್ಚರಿಕೆಯೇ ಆಗಲಿಲ್ಲ. ಆತನ ಮುಖಕ್ಕೆ ನೀರು ಚಿಮುಕಿಸಿ ಎಬ್ಬಿಸಿದಾಗ ಸಿಕ್ಕಿಬಿದ್ದೆ ಅನ್ನುವ ಅರಿವು ಅವನಿಗೆ ಆಗಿದೆ.
ನಂತರ ಪೊಲೀಸರು ಆತನನ್ನು ಹಿಡಿದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಸ್ಥಳದಿಂದ ಮಾಲನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕಪಿಲ್ ವಿರುದ್ಧ ಆರು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಎಸಿಪಿ ವಿಕಾಸ್ ಕುಮಾರ್ ಜೈಸ್ವಾಲ್ ತಿಳಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಬಿಡುಗಡೆಯಾದರೂ ಆತ ತನ್ನ ಕಳ್ಳತನ ಪ್ರವೃತ್ತಿಯನ್ನು ಬಿಟ್ಟಿರಲಿಲ್ಲ. ಮತ್ತೆ ಮುಂದುವರಿಸಿ ಇದೀಗ ಮತ್ತೊಂದು ಬಾರಿಗೆ ಜೈಲು ಪಾಲಾಗಿದ್ದಾನೆ.
Click 👇