ನ್ಯೂಸ್ ನಾಟೌಟ್: ಮಕ್ಕಳನ್ನು ಶಾಲಾ ವ್ಯಾನ್ನಲ್ಲಿ ಶಾಲೆಗೆ ಕಳುಹಿಸುವಾಗ ಹೆಚ್ಚು ಜಾಗೃತೆ ವಹಿಸಬೇಕು. ಕೆಲವೊಮ್ಮೆ ಸ್ವಲ್ಪ ಯಾಮಾರಿದ್ರು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಇಂಥದೊಂದು ಘಟನೆ ಗುಜರಾತ್ ನ ವಡೋದರದಲ್ಲಿ ಸಂಭವಿಸಿದೆ.
ಚಲಿಸುತ್ತಿದ್ದ ಶಾಲಾ ವಾಹನದ ಡೋರ್ ದಿಢೀರ್ ಓಪನ್ ಆಗಿ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಎಸೆಯಲ್ಪಟ್ಟ ಭಯಾನಕ ಘಟನೆ ಗುಜರಾತ್ ನ ವಡೋದರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾನ್ ಚಾಲಕನನ್ನು ಬಂಧಿಸಲಾಗಿದೆ ಎಂದು ಬಂದಿದೆ.
ಈ ಘಟನೆ ಜೂನ್ 19ರಂದು ನಡೆದಿದ್ದು, ಮಾರುತಿ ಇಕೋ ವಾಹನದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವೇಳೆ ವಾಹನದ ಹಿಂಬದಿಯ ಬಾಗಿಲು ತೆರೆಯಲ್ಪಟ್ಟು ಇಬ್ಬರು ಬಾಲಕಿಯರು ರಸ್ತೆಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ರಸ್ತೆಯಲ್ಲಿ ಬೇರೆ ಯಾವುದೇ ವಾಹನಗಳ ಸಂಚಾರವಿಲ್ಲದ ಕಾರಣ ಬಾಲಕಿಯರ ಜೀವಕ್ಕೆ ಅಪಾಯವಿಲ್ಲದೆ ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಅವಘಡದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಬಂದಿದ್ದ ವಾಹನ ಚಾಲಕ ಮಕ್ಕಳನ್ನು ಕುಳ್ಳಿರಿಸಿ ಹಿಂಬದಿ ಬಾಗಿಲನ್ನು ಸರಿಯಾಗಿ ಹಾಕದ ಕಾರಣ ಪ್ರಯಾಣಿಸುವ ವೇಳೆ ಬಾಗಿಲು ತೆರೆದು ಇಬ್ಬರು ಬಾಲಕಿಯರು ರಸ್ತೆಗೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಬಾಲಕಿಯರ ನೆರವಿಗೆ ಬಂದಿದ್ದಾರೆ. ವ್ಯಾನ್ ಚಾಲಕನ ಅಜಾಗರೂಕತೆಗೆ ಸಾರ್ವಜನಿಕರು, ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೋಷಕರು ಚಾಲಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.