ನ್ಯೂಸ್ ನಾಟೌಟ್: ಈಗೆಲ್ಲ ಡಿಜಿಟಲ್ ಮಾಧ್ಯಮ ಯುಗ. ಸಣ್ಣದೊಂದು ಘಟನೆ ನಡೆದರೂ ಸಾಕು ಅದು ಕ್ಷಣಾರ್ಧದಲ್ಲಿ ಜನರಿಗೆ ತಲುಪಿಬಿಡುತ್ತದೆ. ಸುಮಾರು 20-30 ವರ್ಷಗಳ ಹಿಂದಿನ ಪತ್ರಿಕೋದ್ಯಮ ಹಾಗಿರಲಿಲ್ಲ. ಅಂದಿನ ದಿನಗಳ ಗ್ರಾಮೀಣ ಪತ್ರಿಕೋದ್ಯಮದ ಸವಾಲಿನ ಸ್ಥಿತಿಗತಿಗಳನ್ನು ವಿವರಿಸೋದು ಕೂಡ ಅಸಾಧ್ಯ. ಅಂತಹ ಸನ್ನಿವೇಶಗಳಲ್ಲಿ ಎದೆಗುಂದದೆ ಗಟ್ಟಿಯಾಗಿ ನೆಲೆ ನಿಂತು ತಾಳ್ಮೆಯಿಂದ ಕೆಲಸ ನಿರ್ವಹಿಸಿದ ಎರಡು ಹಿರಿಯ ಜೀವಗಳನ್ನು ಸೋಮವಾರ (ಜೂ.3) ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತ ಕುಟುಂಬದ ಸಮ್ಮುಖದಲ್ಲಿ ಪ್ರೀತಿಪೂರ್ವಕವಾಗಿ ಸನ್ಮಾನಿಸಲಾಯಿತು.
ಉದಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಗಂಗಾಧರ ಮಟ್ಟಿ ಹಾಗೂ ಹೊಸದಿಗಂತ ಪತ್ರಿಕೆಯ ಹಿರಿಯ ವರದಿಗಾರ ಜಯಪ್ರಕಾಶ್ ಕುಕ್ಕೇಟ್ಟಿ ಸನ್ಮಾನಕ್ಕೆ ಒಳಗಾದವರು. ಗಂಗಾಧರ ಮಟ್ಟಿ ಗ್ರಾಮೀಣ ಪತ್ರಿಕೋದ್ಯಮದಲ್ಲಿ 4 ದಶಕಕ್ಕೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮಕ್ಕೆ ಮೌಲ್ಯ ತಂದುಕೊಡುವಲ್ಲಿ ಮಟ್ಟಿಯವರದ್ದು ದೊಡ್ದ ಕೊಡುಗೆ. ಬಿಎಸ್ಸಿ ಓದಿರುವ ಮಟ್ಟಿಯವರು ಮಣಿಪಾಲದ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಾರಣಾಂತರಗಳಿಂದ ಆ ಕೆಲಸವನ್ನು ಬಿಡಬೇಕಾಗಿ ಬಂತು. ಆನಂತರ ಮಟ್ಟಿ ಉದಯವಾಣಿ ಬಳಗ ಕೂಡಿಕೊಂಡರು. ಸುಳ್ಯಕ್ಕೆ ಆಗಮಿಸಿದರು. ಅಲ್ಲಿಂದ ನಂತರ ನಿರಂತರವಾಗಿ ನಾಲ್ಕು ದಶಕಕ್ಕೂ ಹೆಚ್ಚು ಸಮಯಗಳ ಕಾಲ ಗ್ರಾಮೀಣ ಪತ್ರಿಕೋದ್ಯಮದ ನಾಡಿಮಿಡಿತವನ್ನು ಚೆನ್ನಾಗಿ ಅರಿತು ಕೆಲಸ ಮಾಡಿದ್ದಾರೆ. ವರದಿಗಾರಿಕೆ ಅಲ್ಲದೆ ಮಾರ್ಕೆಟಿಂಗ್ ಮಾಡಿ ಎಂದಾಗಲೂ ಗಂಗಾಧರ ಮಟ್ಟಿ ತಮ್ಮ ವಯಸ್ಸಿಗೂ ಮೀರಿದ ಕರ್ತವ್ಯ ಪರತೆಯನ್ನು ಮೆರೆದವರು. ಉದಯವಾಣಿ ಪತ್ರಿಕೆಯ ಜಾಹೀರಾತು ಮತ್ತು ಮಾರ್ಕೆಟಿಂಗ್ ವಿಭಾಗ ಎರಡರಲ್ಲೂ ಗಂಗಾಧರ ಮಟ್ಟಿ ಸೈ ಎನಿಸಿಕೊಂಡಿದ್ದಾರೆ. ಈ ಇಳಿವಯಸ್ಸಿನಲ್ಲೂ ಪತ್ರಿಕೋದ್ಯಮದ ಪ್ರೀತಿಯನ್ನು ತನ್ನ ಹೃದಯದಲ್ಲೇ ಇರಿಸಿಕೊಂಡಿದ್ದಾರೆ. 75 ವರ್ಷದ ಹಿರಿಯ ಜೀವ ನಿತ್ಯ ಸುಳ್ಯದಲ್ಲೊಂದು ರೌಂಡ್ ಹೊಡೆದು ಯುವಕರನ್ನೂ ನಾಚಿಸುವಂತೆ ಕರ್ತವ್ಯ ನಿರ್ವಹಿಸುತ್ತಾರೆ. ಇವರು ನೂರಾರು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಸ್ಫೂರ್ತಿ.
ಜಯಪ್ರಕಾಶ್ ಕುಕ್ಕೇಟ್ಟಿ ಗ್ರಾಮೀಣ ಪತ್ರಿಕೋದ್ಯಮಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದವರು. ಸ್ಥಳೀಯ ಪತ್ರಿಕೆಯ ಉಗಮಕ್ಕೂ ಕಾರಣರಾದವರು. ಗ್ರಾಮೀಣ ಭಾಗದ ಹಲವಾರು ರೋಚಕ ವರದಿಗಾರಿಕೆಗೆ ಸಾಕ್ಷಿಯಾದವರು. ಮೊಬೈಲ್, ದೂರವಾಣಿಗಳಿಲ್ಲದ ಕಾಲಗಳಲ್ಲಿ ಕಾಡು ಮೇಡು ಅಲೆದು ವರದಿಗಾರಿಕೆ ಮಾಡಿದ್ದು ಅವರ ವೃತ್ತಿ ಜೀವನದ ಅತ್ಯಂತ ದೊಡ್ಡ ಸಾಹಸ. ಸುಳ್ಯದಲ್ಲಿ ತನ್ನದೇ ಆದ ಪತ್ರಿಕೆಯನ್ನು ಒಂದು ದಶಕಗಳ ಕಾಲ ಮುನ್ನಡೆಸಿದ್ದರು. ಪ್ರಸ್ತುತ ಹೊಸದಿಗಂತ ಪತ್ರಿಕೆಯ ಸುಳ್ಯ ಭಾಗದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. 60 ವರ್ಷ ತುಂಬಿದ ಸಂದರ್ಭದಲ್ಲಿ ಜಯಪ್ರಕಾಶ್ ಕುಕ್ಕೇಟ್ಟಿ ಅವರನ್ನು ಕೂಡ ಸನ್ಮಾನಿಸಲಾಯಿತು. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದಲೂ ಇಬ್ಬರು ದಿಗ್ಗಜರಿಗೆ ಸನ್ಮಾನ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉದ್ಯಮಿ, ಕೃಷಿಕ ಎಂ.ಬಿ ಸದಾಶಿವ, ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಪರಮೇಶ್, ಚಿತ್ರಾಮಟ್ಟಿ, ಕುಸುಮಾವತಿ ಕುಕ್ಕೇಟ್ಟಿ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ , ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.