ನ್ಯೂಸ್ ನಾಟೌಟ್: ಕೆಲವು ಸಲ ಕ್ಷುಲ್ಲಕ ವಿಚಾರ ಕೂಡ ಅತಿರೇಕಕ್ಕೆ ತಿರುಗುತ್ತದೆ. ಇಂದಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದೆ. ಕೆಲವು ವಾಹನ ಚಾಲಕರಿಗೆ ತಾಳ್ಮೆ ಅನ್ನೋದೇ ಇತ್ತೀಚಿನ ದಿನಗಳಲ್ಲಿ ಕಾಣುತ್ತಿಲ್ಲ. ಅಣ್ಣ ಸ್ವಲ್ಪ ನಿಧಾನ ಹೋಗಿ ಎಂದು ಹೇಳಿದ್ದೇ ತಡ ಇಲ್ಲೊಬ್ಬ ಸ್ಕೂಟಿ ಚಾಲಕನಿಗೆ ಆಟೋ ಚಾಲಕನೊಬ್ಬ ಹಲ್ಲೆ ಮಾಡಿರುವ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸುಳ್ಯದ ಕೆವಿಜಿ ಸರ್ಕಲ್ ಬಳಿ ಇಂದು ಬೆಳಗ್ಗೆ (ಜೂ.29) 8.30ರ ಸುಮಾರಿಗೆ ದುರ್ಘಟನೆ ನಡೆದಿದೆ. ಇದೀಗ ಹಲ್ಲೆಗೊಳಗಾಗಿರುವ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅವರು ಹೇಳಿದ್ದು ಹೀಗೆ, “ನಾನು ಬೆಳಗ್ಗೆ ಸ್ಕೂಟಿಯಲ್ಲಿ ಕೆಲಸಕ್ಕೆಂದು ಹೊರಟಿದ್ದೆ. ಈ ಸಂದರ್ಭದಲ್ಲಿ ಆಟೋವೊಂದು ವೇಗವಾಗಿ ಬಂದಿದೆ. ಪಕ್ಕದಲ್ಲಿ ಶಾಲಾ ಮಕ್ಕಳು ಇದ್ದರು, ಆಗ ನನ್ನ ಹತ್ತಿರ ಇದ್ದವರು ಹೇಳಿದ್ರು ಎಂಚಿನ ಸ್ಪೀಡ್ ಯೇ..ಈತ್ ಸ್ಪೀಡ್ ಪೋವಾಡಾ..? (ಎಂತಹ ಸ್ಪೀಡ್ ..ಇಷ್ಟು ವೇಗವಾಗಿ ಹೋಗಬೇಕಾ) ಅಂತ ಹೇಳಿದ್ರು. ಅಲ್ಲೆ ವಾಹನ ನಿಲ್ಲಿಸಿದ್ದ ನಾನು ಕೂಡ ಹೌದು ಎಂದು ಇದಕ್ಕೆ ಧ್ವನಿಗೂಡಿಸಿದೆ. ಅಷ್ಟು ಹೇಳಿದ್ದನ್ನು ಆಟೋ ಚಾಲಕ ಕೇಳಿಸಿಕೊಂಡಿದ್ದೇ ತಡ ಹೋದವನು ಕೂಡ ವಾಪಸ್ ಬಂದು ನನಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಇದೀಗ ನಾನು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ರಸ್ತೆಯಲ್ಲಿ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕು. ಅದರಲ್ಲೂ ಶಾಲಾ ಮಕ್ಕಳು ಹೋಗುವ ಜಾಗದಲ್ಲಂತೂ ವಾಹನ ಸವಾರರಿಗೆ ಸೂಕ್ಷ್ಮ ಗಮನವಿರಬೇಕು. ನಮ್ಮ ತಪ್ಪಿನಿಂದ ಅಮಾಯಕರ ಜೀವ ಬಲಿಯಾಗದಂತೆ ನೋಡಿಕೊಳ್ಳಬೇಕು. ಕೆಲವು ಸಲ ನಮ್ಮ ಕೈ ಮೀರಿ ಕೆಲವು ತಪ್ಪುಗಳು ಸಂಭವಿಸಬಹುದು. ಅದನ್ನು ನಮ್ಮ ಗಮನಕ್ಕೆ ಯಾರಾದರೂ ವ್ಯಕ್ತಿಗಳು ತಂದರೆ ಒಪ್ಪಿಕೊಳ್ಳೋಣ, ನನ್ನದೇ ಸರಿ ಅಂತ ವಾದ ಮಾಡೋದು, ಗಮನಕ್ಕೆ ತಂದವರ ಮೇಲೆಯೇ ಹಲ್ಲೆಯಂತಹ ಪ್ರಕರಣಗಳು ಅಕ್ಷಮ್ಯ. ಪೊಲೀಸರು ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿರುವ ಅವಶ್ಯಕತೆ ಇದೆ.