ನ್ಯೂಸ್ ನಾಟೌಟ್: ಹೆಬ್ಬಾವನ್ನು (ಪೆರ್ಮರಿ) ಮನೆಯೊಳಗೆ, ತೋಟದೊಳಗೆ ನೋಡಿದ್ದೇವೆ. ಉರಗ ತಜ್ಞರನ್ನು ಕರೆದು ‘ಇನಿ ಇಲ್ಲಾಗ್ ಪೆರ್ಮರಿ ಬತ್ತ್ಂಡ್.. ಬೇಗ ಗೋಣಿ ಪತ್ತೊಂದು ಬಲೆ’ ಎಂದು ಕರೆದ ಅದೆಷ್ಟೋ ಉದಾಹರಣೆಗಳಿವೆ.
ಹೌದು, ಇಷ್ಟು ದಿನ ಅಲ್ಲಿ ಇಲ್ಲಿ ಕಾಣುತ್ತಿದ್ದ ಪೆರ್ಮರಿ ಈಗ ಸುಳ್ಯದ ತಾಲೂಕು ಕಚೇರಿಯ ಸರ್ವೇ ಇಲಾಖೆಗೇ ನೇರವಾಗಿ ನುಗ್ಗಿದೆ. ರೆಕಾರ್ಡ್ ರೂಮ್ ಒಳಗೆ ಬೆಚ್ಚಗೆ ಮಲಗಿದ್ದ ಪೆರ್ಮರಿಯನ್ನು ನೋಡಿದ ಅಧಿಕಾರಿಗಳು ಮಾತ್ರ ಒಂದು ಕ್ಷಣ ದಂಗಾಗಿದ್ದಾರೆ.
‘ಅಲೆಯೇ ಪೆರ್ಮರಿ’ ಅಂತ ಹೊರಕ್ಕೆ ಓಡಿದ್ದಾರೆ. ಈ ಘಟನೆ ಇಂದು (ಜೂ.19) ಬೆಳಗ್ಗೆ ನಡೆದಿದೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಲಾಯಿತು. ಅವರು ಓಡೋಡಿ ಬಂದರು. ಉರಗ ತಜ್ಞ ಮೋಹನ್ ಪರಿವಾರಕಾನ ಅವರನ್ನು ಸ್ಥಳಕ್ಕೆ ಕರೆಸಲಾಯಿತು. ಕೊನೆಗೂ ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡಲಾಯಿತು.
ಕಾಡಿನಲ್ಲಿರಬೇಕಾದ ಪೆರ್ಮರಿ ಸರ್ವೇ ರೂಮ್ ಒಳಗೆ ನುಗ್ಗಿದ್ದು ಹೇಗೆ..? ಅನ್ನುವುದರ ಕುರಿತು ಒಂದಷ್ಟು ಹಾಸ್ಯ ಚಟಾಕಿಗಳು ಅಲ್ಲಿ ನೆರೆದಿದ್ದ ಜನರಿಂದ ಹೊರಬಿತ್ತು. ಪೆರ್ಮರಿಗೆ ಸಂಬಂಧಪಟ್ಟ ಜಾಗದ ಯಾವುದೋ ದಾಖಲೆ ಪತ್ರ ಇನ್ನೂ ಪಾಸಾಗಿಲ್ಲ, ಹೀಗಾಗಿ ಅದು ಕಚೇರಿ ಒಳಗೆ ನುಗ್ಗಿ ಪರಿಶೀಲನೆ ನಡೆಸಿದೆ ಎಂದು ನೆರೆದಿದ್ದ ಒಬ್ಬರು ಹಾಸ್ಯ ಚಟಾಕಿಯನ್ನ ಹಾರಿಸಿದರು. ಈ ಮಾತಿಗೆ ಉಳಿದವರೆಲ್ಲರು ಜೋರಾಗಿ ನಕ್ಕರು. ಒಟ್ಟಿನಲ್ಲಿ ಟೆನ್ಷನ್ ನಲ್ಲಿ ಕಚೇರಿಗೆ ಬಂದಿದ್ದ ಒಂದಷ್ಟು ಮಂದಿಗೆ ಸ್ವಲ್ಪ ರಿಲ್ಯಾಕ್ಸ್ ಮಾಡಿದ್ದು ಮಾತ್ರ ಪೆರ್ಮರಿ.