ನ್ಯೂಸ್ ನಾಟೌಟ್: ಕಡಲ್ಕೊರೆತ ತೀವ್ರಗೊಂಡ ಪರಿಣಾಮ,ಗುರುವಾರ (ರಾತ್ರಿ) ಮನೆಯೊಂದು ಸಮುದ್ರಪಾಲಾದ ಘಟನೆ ಉಳ್ಳಾಲದ ಉಚ್ಚಿಲ ಬಟ್ಟಪಾಡಿಯಲ್ಲಿ ನಡೆದಿದೆ. ಅಪಾಯದಂಚಿನಲ್ಲಿದ್ದ ಈ ಮನೆಯಲ್ಲಿ ನೆಲೆಸಿದ್ದ ಬೀಫಾತುಮ್ಮಾ ಎಂಬವರ ಕುಟುಂಬವನ್ನು ಬುಧವಾರವೇ ಸ್ಥಳಾಂತರ ಮಾಡಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ ಎನ್ನಲಾಗಿದೆ.
ಈ ಪ್ರದೇಶದಲ್ಲಿ ಅಪಾಯದಂಚಿನಲ್ಲಿರುವ ಮೂರು ಮನೆಗಳ ಕುಟುಂಬಗಳ ಸದಸ್ಯರನ್ನು ಗುರುವಾರ(ಜೂ.27) ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಬಟ್ಟಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದರಿಂದ ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸಹಿತ ಹಲವು ಅಧಿಕಾರಿಗಳು ತೆರಳಿ ಬೀಫಾತುಮ್ಮ ಅವರಲ್ಲಿ ಮನೆ ಸ್ಥಳಾಂತರಕ್ಕೆ ಸೂಚನೆ ನೀಡಿದ್ದರು.
ಅದರಂತೆ ಬೀಫಾತುಮ್ಮ ಕುಟುಂಬವು ಸಂಬಂಧಿಕರ ಮನೆಗೆ ತೆರಳಿತ್ತು. ಅವರು ಸ್ಥಳಾಂತರಗೊಂಡ ಮರುದಿನವೇ ಅವರ ಮನೆ ಕಡಲ್ಕೊರೆತ ಹೊಡೆತಕ್ಕೆ ಕೊಚ್ಚಿಹೋಗಿದೆ. ಬಟ್ಟಪಾಡಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಬೀಫಾತುಮ್ಮ ಅವರ ಮನೆಯ ಹಿಂಬದಿಯಲ್ಲೇ ಇರುವ ಹಲೀಮಮ್ಮ, ನಫೀಸ ಹಾಗೂ ಸೌದಾ ಎಂಬವರ ಮೂರು ಮನೆಗಳು ಅಪಾಯಕ್ಕೆ ಸಿಲುಕಿವೆ ಎನ್ನಲಾಗಿದೆ.
Click 👇