ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಹತ್ಯೆಯಾಗಿ 10 ದಿನ ಕಳೆದರೂ ಆತನ ಮೊಬೈಲ್ ಸಿಗದಿರುವುದು ಇನ್ನೂ ನಿಗೂಢವಾಗಿ ಉಳಿದಿದೆ. ಹೀಗಾಗಿ ಮೊಬೈಲ್ ಪತ್ತೆ ಹಚ್ಚಲು ಪೊಲೀಸರು ಆರೋಪಿಯನ್ನು ಮತ್ತೆ ಸ್ಥಳ ಮಹಜರು ಮಾಡಲು ಕರೆ ತಂದಿದ್ದಾರೆ ಎನ್ನಲಾಗಿದೆ. ಕೊಲೆ ಪ್ರಕರಣದಲ್ಲಿ ಮೊಬೈಲ್ ಪ್ರಮುಖ ಸಾಕ್ಷ್ಯವಾಗುವ ಕಾರಣ ಪೊಲೀಸರು ಎಲ್ಲಾ ಕಡೆ ಆತನ ಮೊಬೈಲ್ ಗಾಗಿ ಹುಡುಕಾಡಿದ್ದಾರೆ.
ಎಲ್ಲಿಯೂ ಮೊಬೈಲ್ ಸಿಗದ ಕಾರಣ ಪೊಲೀಸರು ಕೊನೆಯ ಬಾರಿಗೆ ಸಿಗ್ನಲ್ ಇದ್ದ ಜಾಗವನ್ನು ಸರ್ಚ್ ಮಾಡಿದ್ದಾರೆ. ರಾಜಕಾಲುವೆ ಜಾಗದಲ್ಲೇ ಕೊನೆಯ ಬಾರಿಗೆ ಸಿಗ್ನಲ್ ತೋರಿಸಿದೆ ಎನ್ನಲಾಗಿದೆ. ಈ ಕಾರಣಕ್ಕೆ ಈಗ ಆರೋಪಿ ಪ್ರದೂಶ್ನನ್ನು ಮತ್ತೆ ಸುಮನಹಳ್ಳಿ ಸತ್ವ ಅಪಾರ್ಟ್ಮೆಂಟ್ ಮುಂಭಾಗದಲ್ಲಿರುವ ರಾಜಕಾಲುವೆ ಬಳಿ ಶವ ಎಸೆದ ಜಾಗದತ್ತ ಕರೆತಂದಿದ್ದಾರೆ.
ಪೊಲೀಸರ ಮನವಿಯ ಮೇರೆಗೆ ಪೌರ ಕಾರ್ಮಿಕರು ರಾಜಕಾಲುವೆಗೆ ಇಳಿದು ಮೊಬೈಲ್ ಹುಡುಕಾಡಿದ್ದಾರೆ. ಆದರೆ ಮೊಬೈಲ್ ಪತ್ತೆಯಾಗದ ಕಾರಣ ಶೋಧ ಕಾರ್ಯ ನಿಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ. ತಡರಾತ್ರಿ ರೇಣುಕಾಸ್ವಾಮಿಯ ದೇಹವನ್ನು ಆರೋಪಿಗಳು ಸುಮನಹಳ್ಳಿ ಸತ್ವಾ ಅಪಾರ್ಟ್ಮೆಂಟ್ ಬಳಿ ಇರುವ ರಾಜಕಾಲುವೆ ಬಳಿ ಬಿಸಾಕಿದ್ದರು. ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಆರೋಪಿಗಳು ಶರಣಾಗಿದ್ದಾರೆ. ಈ ಹಿನ್ನೆಲೆ ಕಳೆದ ಹತ್ತು ದಿನಗಳಿಂದ ಹುಡುಕಾಡಿದರೂ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ಇವತ್ತು ರಾಜಕಾಲುವೆಯಲ್ಲಿ ಹುಡುಕಿದರೂ ಪತ್ತೆಯಾಗದಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
Click 👇