ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾತ್ರವಲ್ಲ ಇಡೀ ರಾಷ್ಟ್ರದಲ್ಲೇ ಸಂಚಲನ ಸೃಷ್ಟಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ NIA (ರಾಷ್ಟ್ರೀಯ ತನಿಖಾ ದಳ) ಹಲವಾರು ಮಂದಿಯನ್ನು ಬಂಧಿಸಿದೆ. ಇನ್ನೂ ಹಲವರನ್ನು ಬಂಧಿಸಲಾಗುತ್ತದೆ ಎಂದು NIA ಹೇಳುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 25ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದೆ.
ಹಾಗಾದರೆ ಈ ಪ್ರಕರಣ ಮುಂದೆ ಎಲ್ಲಿಗೆ ಹೋಗಿ ತಲುಪಬಹುದು..? ಇದೊಂದು ಜಿಜ್ಞಾಸೆ ಎಲ್ಲರಲ್ಲೂಈಗ ಮನೆ ಮಾಡಿದೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಈಗಾಗಲೇ ಪಿಎಫ್ ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಕಾರ್ಯಕರ್ತರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರಮುಖ ಆರೋಪಿಗಳು ಇನ್ನೂ ಕೂಡ ಇದ್ದಾರೆ ಅನ್ನುವಂತಹ ಮಾಹಿತಿ ಇದೆ, ಈಗಾಗಲೇ ಪ್ರಮುಖ ಆರೋಪಿ ಎನ್ನಲಾದ ಮುಸ್ತಫಾ ಪೈಚಾರ್ ನನ್ನು ಬಂಧಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ರಿಯಾಜ್ ಯೂಸಫ್ ಹಾರಳ್ಳಿ ಅಲಿಯಾಸ್ ರಿಯಾಜ್ ನನ್ನು ವಿದೇಶಕ್ಕೆ ಪರಾರಿಯಾಗುವಂತಹ ಸಂದರ್ಭದಲ್ಲಿ ಮಂಗಳವಾರ ಬಂಧಿಸಲಾಗಿದೆ.
ಸದ್ಯ ಆರೋಪಿಗಳ ಬಂಧನವಾಗುತ್ತಿದೆ, ವಿಚಾರಣೆ ನಡೆಯುತ್ತಿದೆ ಅನ್ನುವುದು ನಿಜ. ಆದರೆ ಈ ಎಲ್ಲ ಆರೋಪಿಗಳಿಗೆ ನ್ಯಾಯಾಲಯದಿಂದ ಯಾವಾಗ ಶಿಕ್ಷೆ ಪ್ರಕಟವಾಗುತ್ತದೆ ಅನ್ನುವುದು ಇನ್ನೂ ಗೊಂದಲದಲ್ಲಿದೆ. ರಬ್ಬರ್ ಎಳೆದಂತೆ ಆರೋಪಿಗಳ ಬಂಧನದ ಲಿಸ್ಟ್ ಕೂಡ ಬೆಳೆಯುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮುಂದೆ ಎಲ್ಲಿ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ. ಕೊನೆಗೆ ಸರಿಯಾದ ಸಾಕ್ಷಿ ಇಲ್ಲ ಅನ್ನುವಂತಾಗಿ ಸರಿಯಾದ ಶಿಕ್ಷೆ ಪ್ರಕಟವಾಗದಿರುವ ಸಾಧ್ಯತೆಯೂ ಇದೆ.
ಎರಡು ವರ್ಷಗಳಿಂದ ನಿರಂತರವಾಗಿ ಪ್ರಕರಣದ ಬಗ್ಗೆ ತನಿಖೆ ಆಗುತ್ತಿದೆ. ಆದರೆ ಆರೋಪಿತರಿಗೆ ಸರಿಯಾದ ಶಿಕ್ಷೆ ಪ್ರಕಟಿಸಲು ಇನ್ನೂ ವಿಳಂಬವಾಗುತ್ತಿದೆ. ಪ್ರಕರಣ ಇನ್ನಷ್ಟು ವರ್ಷಗಳ ಕಾಲ ಮುಂದುವರಿದರೆ ಶಿಕ್ಷೆ ಪ್ರಕಟಗೊಳ್ಳದೆ ಕೇಸ್ ಹಳ್ಳ ಹಿಡಿಯುವ ಸಾಧ್ಯತೆಗಳು ಇವೆ ಎಂದು ಮೂಲಗಳು ಹೇಳುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ 2022ರ ಜುಲೈ 26 ರಂದು ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ಹಂತಕರು ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ತಕ್ಷಣ ಪುತ್ತೂರು ಆಸ್ಪತ್ರೆಗೆ ಪ್ರವೀಣ್ ಅವರನ್ನು ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈವರೆಗೆ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಆರಂಭದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ಎನ್ಐಎ 21 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಎನ್ಐಎ ಚಾರ್ಜ್ಶೀಟ್ನ ಪ್ರಕಾರ, ಒಂದು ಸಮುದಾಯದ ಸದಸ್ಯರಲ್ಲಿ ಭಯವನ್ನು ಸೃಷ್ಟಿಸಲು ಮತ್ತು ಸಮಾಜದಲ್ಲಿ ಕೋಮು ದ್ವೇಷ, ಅಶಾಂತಿಯನ್ನು ಸೃಷ್ಟಿಸಲು ಪಿಎಫ್ ಐನ ಕಾರ್ಯಸೂಚಿಯ ಭಾಗವಾಗಿ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿತ್ತು.
ಸೆಪ್ಟೆಂಬರ್ 2022 ರಲ್ಲಿ, ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ಐದು ವರ್ಷಗಳ ನಿಷೇಧ ಹೇರಿತ್ತು. ಪಿಎಫ್ಐ ಮತ್ತು ಅದರ ಎಲ್ಲ ಅಂಗಸಂಸ್ಥೆಗಳು, ಸಹವರ್ತಿಗಳು ಹಾಗೂ ರಂಗಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅಡಿ ನಿಷೇಧ ಹೊರಡಿಸಿತ್ತು. ಇದರೊಂದಿಗೆ ಯುಎಪಿಎ ಸೆಕ್ಷನ್ 35ರ ಅಡಿ ನಿಷೇಧಕ್ಕೆ ಒಳಗಾದ 42 ಭಯೋತ್ಪಾದನಾ ಸಂಘಟನೆಗಳ ಪಟ್ಟಿಗೆ ಪಿಎಫ್ಐ ಸೇರ್ಪಡೆಯಾಗಿದೆ.