ಪೆಟ್ರೋಲ್‌ ಡೀಸೆಲ್‌ ದರ ಏರಿಕೆಯ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ..! ಸಿದ್ದರಾಮಯ್ಯ ತೈಲ ದರ ಏರಿಕೆಗೆ ನೀಡಿದ ಕಾರಣಗಳೇನು..?

ನ್ಯೂಸ್ ನಾಟೌಟ್: ರಾಜ್ಯ ಸರ್ಕಾರ ತೈಲ ದರ ಏರಿಕೆ ಮಾಡಿರುವ ಬಗ್ಗೆ ತೀವ್ರ ಟೀಕೆಗೆ ಒಳಗಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಡೀಸೆಲ್‌ ಹಾಗೂ ಪೆಟ್ರೋಲ್‌ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳು ಹಾಗೂ ನೆರೆಯ ಮಹಾರಾಷ್ಟ್ರಗೆ ಹೋಲಿಸಿದರೆ ಕಡಿಮೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ತೈಲ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಭಾನುವಾರ(ಜೂ.೧೬) ಮಾಧ್ಯಮ ಪ್ರಕಟಣೆ ನೀಡಿ ಸ್ಪಷ್ಟನೆ ನೀಡಿದ್ದಾರೆ. ” ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು 29.84% ಗೆ ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು 18.44% ಗೆ ಹೆಚ್ಚಳ ಮಾಡಿದೆ. ಈ ಏರಿಕೆಯ ನಂತರವೂ ಕರ್ನಾಟಕವು ತೈಲೋತ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳಿಗಿಂತ ಹಾಗೂ ನಮ್ಮ ರಾಜ್ಯದ ಆರ್ಥಿಕತೆಯ ಗಾತ್ರಕ್ಕೆ ಹೋಲುವ ಮಹಾರಾಷ್ಟ್ರ ರಾಜ್ಯಕ್ಕಿಂತಲೂ ಕಡಿಮೆಯಿದೆ ” ಎಂದಿದ್ದಾರೆ. ರಾಜ್ಯದ ಪರಿಷ್ಕೃತ ದರ ಕೂಡ ಜನರಿಗೆ ಹೊರೆಯಾಗದಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೌಲ್ಯವರ್ಧಿತ ತೆರಿಗೆ ಹೆಚ್ಚಳದ ಹೊರತಾಗಿಯೂ, ರಾಜ್ಯದಲ್ಲಿ ಡೀಸೆಲ್‌ ಬೆಲೆ ಗುಜರಾತ್ ಹಾಗೂ ಮಧ್ಯಪ್ರದೇಶಗಳಿಗಿಂತ ಕಡಿಮೆಯಿದೆ. ಪೆಟ್ರೋಲಿಯಂ ಉತ್ಪನ್ನಗಳ ದರವು ಜನರಿಗೆ ಹೊರೆಯಾಗದ ರೀತಿಯಲ್ಲಿ ಲಭ್ಯವಾಗಿಸಲು ನಾವು ಬದ್ಧರಿದ್ದೇವೆ ಎಂದಿದ್ದಾರೆ. ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಸಂಪನ್ಮೂಲಗಳನ್ನು ಇತರೆ ರಾಜ್ಯಗಳಿಗೆ ಹಂಚಿಕೆ ಮಾಡುವ ದುರುದ್ದೇಶದಿಂದ ಕೇಂದ್ರ ಸರ್ಕಾರ ರಾಜ್ಯದ ಬಿಜೆಪಿ ಸರ್ಕಾರವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಮೌಲ್ಯವರ್ಧಿತ ತೆರಿಗೆ ದರವನ್ನು ಕಡಿತಗೊಳಿಸುವಂತೆ ಮಾಡಿ, ತನ್ನ ಪಾಲಿನ ತೆರಿಗೆ ಹೆಚ್ಚಳ ಮಾಡುವ ಮೂಲಕ ಲಕ್ಷಾಂತರ ಕೋಟಿ ಸಂಗ್ರಹಿಸಿತ್ತು. ಈ ಅನರ್ಥ ನೀತಿಯಿಂದಾಗಿ ರಾಜ್ಯದ ತೆರಿಗೆ ಸಂಗ್ರಹಕ್ಕೆ ದೊಡ್ಡ ಹೊಡೆತ ಬಿದ್ದರೆ ಎಂದಿದ್ದಾರೆ. Click 👇