ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆ ಫಲಿತಾಂಶ 2024 ಪ್ರಕಟಗೊಂಡ ಬೆನ್ನಲ್ಲೇ ರಾಜಕೀಯ ಚಟುವಟಿಗಳು ಗರಿಗೆದರಿವೆ. ಯಾವುದೇ ಪಕ್ಷವೂ ಸ್ವತಂತ್ರವಾಗಿ ಗದ್ದುಗೆ ಏರಲು ಸಾಧ್ಯವಿಲ್ಲದ ಕಾರಣ ಮಿತ್ರ ಪಕ್ಷಗಳ ಒಲವನ್ನು, ಬೇಡಿಕೆಗಳನ್ನು ತಿಳಿದು ನಡೆಯಬೇಕಾದದ್ದು ಅನಿವಾರ್ಯ. ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿಲ್ಲ. ಹೀಗಾಗಿ ಅತಂತ್ರ ಸ್ಥಿತಿ ಎದುರಾಗಿದೆ.ಆದರೆ, ಬಿಜೆಪಿ 240 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಪಡೆದಿರುವುದರಿಂದ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಕಾಂಗ್ರೆಸ್ ಕೂಡ ಅಧಿಕಾರ ರಚನೆಗೆ ಕಸರತ್ತು ಶುರು ಮಾಡಿದೆ.
ಇಂದು ಎನ್ಡಿಎ ಮತ್ತು INDIA ಮೈತ್ರಿ ಒಕ್ಕೂಟ ಮಹತ್ವದ ಸಭೆಯನ್ನು ನಡೆಸಲಿವೆ ಎನ್ನಲಾಗಿದೆ. ಚುನಾವಣಾ ಫಲಿತಾಂಶ ಹೊರಬಿದ್ದ ಒಂದು ದಿನದ ಬೆನ್ನಲ್ಲೇ ಎನ್ಡಿಎ ಮತ್ತು ಇಂಡಿ ಒಕ್ಕೂಟ ಇಂದು ಮಹತ್ವದ ಸಭೆಗಳನ್ನು ನಡೆಸುತ್ತಿವೆ. ಸಭೆಯಲ್ಲಿ ಮುಂದೆ ಏನು ಮಾಡಬೇಕೆಂದು ತೀರ್ಮಾನಿಸಲಿವೆ. ಈ ಸಭೆಯಲ್ಲಿ ಹಾಜರಾಗಲು ಈಗಾಗಲೇ ಪ್ರಮುಖ ನಾಯಕ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಅದರಲ್ಲೂ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಇಬ್ಬರು ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ. ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 294 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಸರ್ಕಾರ ರಚನೆಗೆ ಬೇಕಿರುವ 272 ಬಹುಮತದ ಗುರಿಗಿಂತ 22 ಸ್ಥಾನಗಳಲ್ಲಿ ಮುಂದಿದೆ. ಇತ್ತ ವಿಪಕ್ಷಗಳ ಮೈತ್ರಿ ಒಕ್ಕೂಟ 234 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಬಹುಮತದ ಗುರಿಗಿಂತ 38 ಸ್ಥಾನಗಳು ಕಡಿಮೆ ಇದೆ. ಇದೀಗ ಸರ್ಕಾರ ರಚನೆಯಲ್ಲಿ ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ಬಿಹಾರದ ಹಾಲಿ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಇನ್ನು ಈ ಎರಡು ಪಕ್ಷಗಳು ಬಿಜೆಪಿ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ಟಿಡಿಪಿ ಮತ್ತು ಜೆಡಿಯು ಎನ್ಡಿಎ ಮೈತ್ರಿಕೂಟದ ಭಾಗವಾಗಿವೆ. ವಿಪಕ್ಷಗಳ ಮೈತ್ರಿ ಒಕ್ಕೂಟ ಸರ್ಕಾರ ರಚನೆ ಮಾಡಬೇಕಾದರೆ ಟಿಡಿಪಿ ಮತ್ತು ಜೆಡಿಯು ಬೆಂಬಲದ ಅವಶ್ಯಕತೆ ಇದೆ. ಹೀಗಾಗಿ ಈಗಾಗಲೇ ಉಭಯ ಪಕ್ಷದ ಪ್ರಮುಖ ನಾಯಕರನ್ನು ಸಂಪರ್ಕಿಸಲು ಕಾಂಗ್ರೆಸ್ ಯತ್ನಿಸಿದೆ ಎನ್ನಲಾಗಿದೆ.
Click 👇