ನ್ಯೂಸ್ ನಾಟೌಟ್: ಎನ್ಡಿಎ ನೇತೃತ್ವದ ಸರ್ಕಾರ ರಚನೆಗೆ ಹಂಗಾಮಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಸಂಜೆ (ಜೂ. 7) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಎನ್ಡಿಎ ಮಿತ್ರಪಕ್ಷಗಳ ಬೆಂಬಲ ಪತ್ರವನ್ನು ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ರಾಷ್ಟ್ರಪತಿ ಭೇಟಿಗೂ ಮುನ್ನ ಪ್ರಧಾನಿ ಮೋದಿ ತನ್ನ ರಾಜಕೀಯ ಗುರು, ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಬಳಿಕ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರನ್ನು ಕೂಡ ಭೇಟಿ ಮಾಡಿ ಮಾತನಾಡಿದ್ದಾರೆ.
ಹಳೆಯ ಸಂಸತ್ ಹಾಲ್ನಲ್ಲಿ ಶುಕ್ರವಾರ ಎನ್ಡಿಎ ಸಭೆ ನಡೆದಿತ್ತು. ಸಭೆಯಲ್ಲಿ ಎನ್ಡಿಎ ಮಿತ್ರಪಕ್ಷದ ನಾಯಕರು ಸೇರಿ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಗೆ ಒಪ್ಪಿಗೆ ನೀಡಿದರು. ಮೋದಿ ಎನ್ ಡಿಎ ಮೈತ್ರಿಕೂಟದ ನಾಯಕನಾಗಿ ಆಯ್ಕೆಯಾದ ಬಳಿಕ, ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದಾರೆ. ಜೂನ್ 9 ರಂದು ಸಂಜೆ 6 ಗಂಟೆಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.