ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಉಡುಪಿ ಪೇಜಾವರ ಶ್ರೀಗಳಿಗೆ ವಿಶೇಷ ಆಹ್ವಾನ, ಆಹ್ವಾನ ಇದ್ದರೂ ಹೋಗುವುದಿಲ್ಲ ಎಂದ ಮಮತಾ ಬ್ಯಾನರ್ಜಿ..!

ನ್ಯೂಸ್ ನಾಟೌಟ್: ನರೇಂದ್ರ ಮೋದಿ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಮೂರನೇ ಬಾರಿ ಪ್ರಧಾನಿ ಗದ್ದುಗೆ ಏರಲು ಸಕಲ ಸಿದ್ಧತೆಗಳು ನಡೆದಿವೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ಧೂರಿ ಸಮಾರಂಭ ಇಂದು(ಜೂ.9) ನಡೆಯಲಿದ್ದು, ಈ ಸಮಾರಂಭಕ್ಕೆ ಉಡುಪಿ ಪೇಜಾವರ ಶ್ರೀಗಳಿಗೆ ವಿಶೇಷಾಹ್ವಾನ ನೀಡಲಾಗಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಇಂದು ಸಂಜೆ 7ಗಂಟೆ 15 ನಿಮಿಷಕ್ಕೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಲಿದ್ದಾರೆ. ಮೋದಿ ಪದಗ್ರಹಣ ಕಾರ್ಯಕ್ರಮಕ್ಕೆ ಪೇಜಾವರಶ್ರೀಗಳಿಗೂ ಆಹ್ವಾನ ಸಿಕ್ಕಿದ್ದು ಬೆಳಗ್ಗೆ 11.30ಕ್ಕೆ ಕೆಂಪೇಗೌಡ ಏರ್​ಪೋರ್ಟ್​ನಿಂದ ದೆಹಲಿಗೆ ಶ್ರೀಗಳು ತೆರಳಲಿದ್ದಾರೆ ಎಂದು ವರದಿ ತಿಳಿಸಿದೆ. ತಡರಾತ್ರಿ ಪ್ರಧಾನಮಂತ್ರಿ ಕಚೇರಿಯಿಂದ ಕರೆ ಮಾಡಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗೆ ಆಹ್ವಾನ ಮಾಡಲಾಗಿದೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಗೂ ಆಹ್ವಾನ ನೀಡಲಾಗಿದೆ. ನಿನ್ನೆ ರಾತ್ರಿ ಮಲ್ಲಿಕಾರ್ಜುನ ಖರ್ಗೆ ಆಹ್ವಾನ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಬೇಕೋ ಬೇಡವೋ ಎಂದು ಇನ್ನೂ ನಿರ್ಧರಿಸಿಲ್ಲ. ಮತ್ತೊಂದೆಡೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ ಎನ್ನಲಾಗಿದೆ.