ನ್ಯೂಸ್ ನಾಟೌಟ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸರ್ಕಾರದ ನೂತನ ಸಚಿವರಿಗೆ ಸೋಮವಾರ(ಜೂ.11) ಖಾತೆ ಹಂಚಿಕೆ ಮಾಡಲಾಗಿದೆ. ಬಿಜೆಪಿ ನಾಯಕ ಅಮಿತ್ ಶಾ ಇಂದು (ಮಂಗಳವಾರ) ಎರಡನೇ ಬಾರಿಗೆ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದು, ಕುಮಾರ ಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯ ಜವಾಬ್ದಾರಿ ನೀಡಲಾಗಿದೆ.
ಅಮಿತ್ ಶಾ (ಗೃಹ), ರಾಜನಾಥ್ ಸಿಂಗ್ (ರಕ್ಷಣೆ), ನಿರ್ಮಲಾ ಸೀತಾರಾಮನ್ (ಹಣಕಾಸು, ಕಾರ್ಪೊರೇಟ್ ವ್ಯವಹಾರ), ಎಸ್.ಜೈಶಂಕರ್ (ವಿದೇಶಾಂಗ) ಅದೇ ಖಾತೆಗಳಲ್ಲಿ ಮುಂದುವರಿಯಲಿದ್ದಾರೆ. ನಿತಿನ್ ಗಡ್ಕರಿ (ಹೆದ್ದಾರಿ), ಪೀಯೂಷ್ ಗೋಯಲ್ (ವಾಣಿಜ್ಯ), ಧರ್ಮೇಂದ್ರ ಪ್ರಧಾನ್ (ಶಿಕ್ಷಣ), ಭೂಪೇಂದ್ರ ಯಾದವ್ (ಪರಿಸರ) ಅವರಿಗೆ ಹಿಂದಿನ ಖಾತೆಗಳನ್ನೇ ನೀಡಲಾಗಿದೆ. ಮಾಜಿ ಸಿಎಂಗಳಾದ ಮನೋಹರ್ ಲಾಲ್ ಖಟ್ಟರ್ಗೆ ಇಂಧನ, ವಸತಿ ಮತ್ತು ನಗರ ವ್ಯವಹಾರಗಳು, ಶಿವರಾಜ್ ಸಿಂಗ್ ಚೌಹಾಣ್ಗೆ ಕೃಷಿ, ಜಿತನ್ ರಾಮ್ ಮಾಂಜಿಗೆ ಮಧ್ಯಮ ಮತ್ತು ಸಣ್ಣ ಕೈಗಾರಿಕೆ, ಹೆಚ್.ಡಿ ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದೆ. ಅಶ್ವಿನಿ ವೈಷ್ಣವ್ ಗೆ ರೈಲ್ವೆ ಖಾತೆ, ಹೆಚ್ಚುವರಿಯಾಗಿ ಮಾಹಿತಿ ಮತ್ತು ಪ್ರಸಾರ ಖಾತೆಯನ್ನು ಪಡೆದುಕೊಂಡಿದ್ದಾರೆ. ಟಿಡಿಪಿ ಸಂಸದ ರಾಮ್ ಮೋಹನ್ ನಾಯ್ಡುಗೆ ನಾಗರಿಕ ವಿಮಾನಯಾನ, ಗುಜರಾತ್ನ ಬಿಜೆಪಿ ಸಂಸದ ಕಾರ್ ಪಾಟೀಲ್ ಗೆ ಜಲಶಕ್ತಿ, ಕಿರಣ್ ರಿಜಿಜುಗೆ ಸಂಸದೀಯ ವ್ಯವಹಾರಗಳ ಖಾತೆಯ ನೀಡಲಾಗಿದೆ.
ಧರ್ಮೇಂದ್ರ ಪ್ರಧಾನ್ ಶಿಕ್ಷಣ ಖಾತೆ ಮತ್ತು ಭೂಪೇಂದ್ರ ಯಾದವ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ, ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಆರೋಗ್ಯ ಖಾತೆ ನೀಡಲಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾಗೆ ಟೆಲಿಕಾಂ ಖಾತೆ, ಅನ್ನಪೂರ್ಣ ದೇವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ, ಹರ್ದೀಪ್ ಪುರಿಗೆ ಪೆಟ್ರೋಲಿಯಂ, ಸರ್ಬಾನಂದ್ ಸೋನೋವಾಲ್ಗೆ ಶಿಪ್ಪಿಂಗ್, ನಿತೀಶ್ ಕುಮಾರ್ ಆಪ್ತ ಲಲನ್ ಸಿಂಗ್ಗೆ ಪಂಚಾಯತ್ ರಾಜ್ ಖಾತೆ ನೀಡಲಾಗಿದೆ. ಪಿಯೂಷ್ ಗೋಯಲ್ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯನ್ನು ಮತ್ತೊಮ್ಮೆ ಪಡೆದಿದ್ದು, ಈ ಹಿಂದೆ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ ಪ್ರಲ್ಹಾದ್ ಜೋಶಿಗೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಗಳನ್ನು ನೀಡಲಾಗಿದೆ.
ಜೆಡಿಯು ಸಂಸದ ರಾಮ್ ನಾಥ್ ಠಾಕೂರ್ ಗೆ ಕೃಷಿ ಸಚಿವಾಲಯದ ಕಿರಿಯ ಸಚಿವರಾಗಿ ನೇಮಕಗೊಂಡಿದ್ದು, ಆರ್ಎಲ್ಡಿ ಸಂಸದ ಜಯಂತ್ ಚೌಧರಿ ಕೌಶಲ್ಯ, ಉದ್ಯಮಶೀಲತೆ ಸಚಿವಾಲಯಕ್ಕೆ ನಿಯೋಜಿಸಲಾಗಿದೆ. ಕಲ್ಲಿದ್ದಲು, ಗಣಿ ಸಚಿವರಾಗಿ ಜಿ ಕಿಶನ್ ರೆಡ್ಡಿ ನೇಮಕಗೊಳಿಸಲಾಗಿದೆ. ಒಡಿಶಾದ ಬಿಜೆಪಿ ಸಂಸದ ಜುಯಲ್ ಓರಾಮ್ ಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಹಂಚಿಕೆ ಮಾಡಲಾಗಿದೆ. ಗಿರಿರಾಜ್ ಸಿಂಗ್ ಅವರನ್ನು ಜವಳಿ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ವರದಿ ತಿಳಿಸಿದೆ.
Click 👇