ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣ ಅಲ್ಲಲ್ಲಿ ದಾಖಲಾಗುತ್ತಿದೆ. ಅಮಾಯಕರನ್ನು ವಿವಿಧ ರೀತಿಯಲ್ಲಿ ವಂಚಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ಬೆನ್ನಲ್ಲೆ ನೆರೆಯ ಕೊಡಗಿನಲ್ಲೂ ಇದೇ ರೀತಿಯಾದಂತಹ ಪ್ರಕರಣವೊಂದು ನಡೆದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆಗೂ ಇದೀಗ ಸೈಬರ್ ವಂಚನೆ ಅನ್ನೋದು ಕಾಲಿಟ್ಟಿದೆ. ವಿರಾಜಪೇಟೆಯ ಕರಡಿಗೋಡು ಗ್ರಾಮದ ದೇವಯ್ಯ (70 ವರ್ಷ)ಎಂಬುವವರು ಸೈಬರ್ ವಂಚನೆಗೆ ಒಳಗಾದವರಾಗಿದ್ದಾರೆ. ಈ ವಂಚನೆಯಿಂದ ಅವರು ಕೋಟ್ಯಂತರ ರೂ. ಕಳೆದುಕೊಂಡಿದ್ದಾರೆ.
ದೇವಯ್ಯ ಅವರು ಕಾಫಿ ಬೆಳೆಗಾರರು. ಕೊಡಗಿನಲ್ಲಿ ಹಂತ..ಹಂತವಾಗಿ ತನ್ನ ಕೃಷಿಯನ್ನು ಅಭಿವೃದ್ಧಿಪಡಿಸಿಕೊಂಡು ಬೆಳೆದವರು. ವಿರಾಜಪೇಟೆಯಲ್ಲಿ ದೇವಯ್ಯ ಅವರದ್ದು ದೊಡ್ಡ ಹೆಸರು. ಅಂತಹ ದೇವಯ್ಯ ಅವರಿಗೆ ಇತ್ತೀಚಿಗೆ ಫೆಡೆಕ್ಸ್ ಕೊರಿಯರ್ ಸಂಸ್ಥೆಯಿಂದ ಕರೆ ಮಾಡುತ್ತಿರುವುದಾಗಿ ವಂಚಕರು ಫೋನ್ ಮಾಡಿದ್ದಾರೆ. ನಿಮ್ಮ ಹೆಸರಿಗೆ ಮಾದಕ ದ್ರವ್ಯ (ಡ್ರಗ್ಸ್ ) ಬಂದಿದೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನಿಮಗೆ ಕಷ್ಟವಾಗಲಿದೆ ಎಂದು ಹೆದರಿಸಿದ್ದಾರೆ. ದೇವಯ್ಯ ಹೆದರಿ ಕಂಗಾಲಾಗಿದ್ದಾರೆ.
ನೀವು ಹಣ ಕೊಟ್ಟರೆ ನಾವು ಏನು ಮಾಡುವುದಿಲ್ಲ ಅಂತ ತಿಳಿಸಿದ್ದಾರೆ. ವಂಚಕರು ದೇವಯ್ಯ ಅವರಿಂದ ಒಟ್ಟು 2.20 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದಾದ ಬಳಿಕ ದೇವಯ್ಯ ಅವರು ಬೇರೆ ದಾರಿ ಕಾಣದೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದೀಗ ದೇವಯ್ಯ ಮಡಿಕೇರಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇಂತಹ ಪ್ರಕರಣಗಳು ಸಮಾಜದಲ್ಲಿ ಪದೇ ಪದೆ ನಡೆಯುತ್ತಿದೆ. ಅಮಾಯಕರು ವಂಚನೆಗೆ ಒಳಗಾಗುತ್ತಿದ್ದಾರೆ. ಇಂತಹ ವಂಚಕರ ವಿರುದ್ಧ ಪೊಲೀಸ್ ಇಲಾಖೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕಿದೆ.