KSRTC: ಸರ್ಕಾರಿ ಸಾರಿಗೆ ಬಸ್ ಗಳ ದರ ಏರಿಕೆ..! ಡೀಸೆಲ್ – ಪೆಟ್ರೋಲ್, ಹಾಲು ಈಗ ಬಸ್ ದರವೂ ಹೆಚ್ಚಳಕ್ಕೆ ಸಿದ್ಧತೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಡೀಸೆಲ್ ಮತ್ತು ಪೆಟ್ರೋಲ್ ದರ ಏರಿಕೆಯ ಬಳಿಕ ಹಾಲಿನ ದರವೂ ಏರಿಕೆ ಮಾಡಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಈಗ ಸಂಸ್ಥೆಗೆ ಪ್ರತಿ ತಿಂಗಳು 3 ಕೋಟಿ ರೂ. ಆರ್ಥಿಕ ಹೊರೆ ಬೀಳಲಿದೆ. ಈ ಭಾರವನ್ನು ಸರಿದೂಗಿಸಲು ಸಂಸ್ಥೆಯು ಬಸ್ ಪ್ರಯಾಣ ದರದಲ್ಲಿ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಯುತ್ತಿದೆ. ಜೂ. 15ರಿಂದ ರಾಜ್ಯದಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 3.05 ರೂ. ಏರಿಕೆಯಾಗಿದೆ. ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಾಹನಗಳಿಗೆ ನಿತ್ಯ ಸರಾಸರಿ 3 ಲಕ್ಷ ಲೀಟರ್ ಡೀಸೆಲ್ ಬಳಕೆ ಮಾಡುತ್ತಿದೆ. ಇದರಿಂದ ನಿತ್ಯ 9 ಲಕ್ಷ ರೂ. ಹೊರೆಯಾಗುತ್ತಿದ್ದು, ತಿಂಗಳಿಗೆ 3 ಕೋಟಿ ರೂ. ಹಣವನ್ನು ಇಂಧನಕ್ಕಾಗಿ ಹೆಚ್ಚುವರಿಯಾಗಿ ಪಾವತಿಸಬೇಕಾದ ಪರಿಸ್ಥಿತಿ ಸಂಸ್ಥೆಗೆ ಎದುರಾಗಿದೆ ಎಂದು ನಿಗಮ ಹೇಳಿಕೊಂಡಿದೆ. 2020ರ ಬಳಿಕ ಬಸ್ ಪ್ರಯಾಣ ದರದಲ್ಲಿ ಏರಿಕೆಯಾಗಿಲ್ಲ. ಈ ನಡುವೆ ಸತತವಾಗಿ ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಬಸ್ ಪ್ರಯಾಣ ದರದಲ್ಲಿ ಏರಿಕೆ ಮಾಡಲು ಅವಕಾಶ ನೀಡಬೇಕೆಂದು ನಾಲ್ಕು ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ. ಮಹಿಳೆಯರಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಶಕ್ತಿ ಯೋಜನೆ ಯಿಂದ ಪ್ರಯಾಣಿಕರ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಆದರೆ, ಇದೀಗ ಪ್ರಯಾಣ ದರ ಏರಿಕೆ ಮಾಡಿದರೆ ಮಹಿಳೆಯರಿಗೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಪುರುಷರಿಗೆ ಹೊರೆಯಾಗಲಿದೆ. ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ 289 ಕೋಟಿ ರೂ. (ಮೇ ಅಂತ್ಯದವರೆಗೆ) ಪಾವತಿಸುವುದು ಬಾಕಿ ಉಳಿಸಿಕೊಂಡಿದೆ ಎಂದು ವರದಿ ತಿಳಿಸಿದೆ. Click 👇