ನ್ಯೂಸ್ ನಾಟೌಟ್ : ರಷ್ಯಾದ ನದಿಯಲ್ಲಿ ಮುಳುಗಿ ಮೃತಪಟ್ಟ ಭಾರತದ ನಾಲ್ವರು ವಿದ್ಯಾರ್ಥಿಗಳ ಪೈಕಿ ಒಬ್ಬ, ಸಾಯುವ ಹೊತ್ತಿನಲ್ಲಿ ಮನೆಯವರಿಗೆ ವಿಡಿಯೋ ಕರೆ ಮಾಡಿದ್ದ ಎನ್ನಲಾಗಿದೆ. ರಷ್ಯಾದ ವಿಲಿಕಿ ನವ್ಗೊರೊಡ್ನಲ್ಲಿರುವ ನವ್ಗೊರೊಡ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ವೈದ್ಯಕಿಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಹರ್ಷಲ್ ಅನಂತ್ರಾವ್ ದೆಸಾಲೆ, ಜಿಶಾನ್ ಅಷ್ಪಕ್ ಪಿಂಜಾರಿ, ಜಿಯಾ ಫಿರೋಜ್ ಪಿಂಜಾರಿ ಮತ್ತು ಮಲಿಕ್ ಗುಲಾಮ್ಗೌಸ್ ಮೊಹಮ್ಮದ್ ಯಾಕುಬ್ ಸೇಂಟ್ ಪೀಟರ್ಸ್ಬರ್ಗ್ ಸಮೀಪದ ವೊಲ್ಖೊವ್ ಎಂಬ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮತ್ತೊಬ್ಬ ವಿದ್ಯಾರ್ಥಿನಿ ನಿಶಾ ಭೂಪೇಶ್ ಸೋನವಾನೆ ಎಂಬವರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ‘ಎಲ್ಲರೂ ವೊಲ್ಖೊವ್ ನದಿ ತೀರಕ್ಕೆ ತೆರಳಿದ್ದಾಗ ಜಿಶಾನ್, ಮನೆಗೆ ವಿಡಿಯೊ ಕರೆ ಮಾಡಿದ್ದ. ನೀರಿನ ರಭಸ ಹೆಚ್ಚಿತ್ತು ಮತ್ತು ನೀರು ಬಂಡೆಗಳಿಗೆ ಅಪ್ಪಳಿಸುತ್ತಿದ್ದುದನ್ನು ಕಂಡ ಆತನ ತಂದೆ ಮತ್ತು ಮನೆಯ ಇತರರು, ಎಲ್ಲರೂ ಕೂಡಲೇ ನದಿಯಿಂದ ಹೊರಗೆ ಬನ್ನಿ ಎಂದು ಆತಂಕದಿಂದ ಹೇಳಿದ್ದರು. ಅಷ್ಟರಲ್ಲೇ ಅವರೆಲ್ಲ ಕೊಚ್ಚಿಹೋದರು’ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಭಾರತೀಯ ರಾಯಭಾರ ಕಚೇರಿಗೆ ದುರಂತದ ವಿಚಾರ ಮುಟ್ಟಿಸಿ, ಸಂತಾಪ ಸೂಚಿಸಿರುವ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ವೊಲ್ಖೊವ್ ನದಿ ತೀರದಲ್ಲಿ ವಿಹರಿಸುತ್ತಿದ್ದರು. ಆಕಸ್ಮಿಕವಾಗಿ ದುರಂತ ಸಂಭವಿಸಿದೆ ಎಂದಿದೆ.
Click 👇