ನ್ಯೂಸ್ ನಾಟೌಟ್: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಓರ್ವ ನಟನನ್ನು ಬಂಧಿಸೋದು ಸಣ್ಣ ವಿಚಾರವಲ್ಲ. ಕರ್ನಾಟಕದ ಸಿನಿಮಾ ಜಗತ್ತಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ನಟನನ್ನು ಬಂಧಿಸೊ ಕಾರ್ಯದಲ್ಲಿ ಸ್ವಲ್ಪ ಎಡವಟ್ಟಾದರೂ ಒಂದೋ ಕೆಲಸ ಹೋಗಬಹುದು,ಇಲ್ಲ ಜೀವವೇ ಹೋಗಬಹುದು. ಅಷ್ಟೊಂದು ಅಪಾಯಕಾರಿಯಾಗಿತ್ತು ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿಸುವ ಕಾರ್ಯ.
ಎಲ್ಲರಿಗೂ ಈಗ ಕಾಡ್ತಿರೋದು ಒಂದೇ ಪ್ರಶ್ನೆ. ಈ ನಟ ದರ್ಶನ್ ನನ್ನು ಬಂಧಿಸಿದ ಆ ದಿಟ್ಟ ಅಧಿಕಾರಿ ಯಾರು ಅಂತ..? ಈ ಪ್ರಶ್ನೆಗೆ ನಮ್ಮ ‘ನ್ಯೂಸ್ ನಾಟೌಟ್’ ಬೆಂಗಳೂರು ಪ್ರತಿನಿಧಿ ನಾಗೇಶ್ ನೀಡಿರುವ ವರದಿ ಓದಿದರೆ ಮೈ ರೋಮಾಂಚನಗೊಳ್ಳುತ್ತೆ. ಈ ಸ್ಟೋರಿಯಲ್ಲಿ ಅಂತಹ ರೋಚಕ ಕಥೆ ಏನಿದೆ..? ಈ ಬಗ್ಗೆ ಅವರು ಏನು ಹೇಳಿದ್ರು..? ಇದೆಲ್ಲದರ ಬಗೆಗಿನ ‘ಪಿನ್ ಟು ಪಿನ್’ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೀವಿ ಓದಿ…….
“ಎರಡು ದಿನಗಳ ಹಿಂದೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸುಮನಹಳ್ಳಿ ಬ್ರಿಡ್ಜ್ ಸಮೀಪದ ಮೋರಿಯಲ್ಲಿ ಕೊ*ಲೆ* ಗೈದು ಬಿಸಾಕಿರುವ ಸ್ಥಿತಿಯಲ್ಲಿ ಮೃತದೇಹವೊಂದು ಸಿಕ್ಕಿದೆ ಅನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತು, ಪೊಲೀಸರು ಸ್ಥಳಕ್ಕೆ ಬಂದ್ರು. ಪರಿಶೀಲನೆ ನಡೆಸಿದರು. ಮೇಲ್ನೋಟಕ್ಕೆ ಇದು ಕೊ*ಲೆ ಅನ್ನೋದು ಕಂಡು ಬಂದಿತ್ತು, ಈ ಪ್ರಕಾರವಾಗಿ ಕೊ*ಲೆ ಕೇಸು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದರು.
ತನಿಖೆ ಆರಂಭವಾಗುತ್ತಿದ್ದಂತೆ 3-4 ಮಂದಿ ಠಾಣೆಗೆ ಬಂದು ಕೊ*ಲೆ ಮಾಡಿದ್ದು ನಾವೇ ಅಂತ ಶರಣಾಗ್ತಾರೆ. ಹಾಗೆ ಶರಣಾದವರಲ್ಲಿ ಕಾರಣ ಕೇಳಿದಾಗ ಫೈನಾನ್ಸ್ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕೃತ್ಯ ಎಸಗಿದ್ದೇವೆ ಎಂದು ಶರಣಾದವರು ಹೇಳುತ್ತಾರೆ. ಈ ಅಜ್ಜಿ ಕಥೆಯನ್ನೆಲ್ಲ ಕೇಳಿ ನಂಬಿದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಅಧಿಕಾರಿಗಳು ಕೇಸ್ ಮುಗಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನೇನು ಫೈಲ್ ಕ್ಲೋಸ್ ಮಾಡಬೇಕು ಅನ್ನುವಷ್ಟರಲ್ಲಿ ಆ ಕೇಸಿಗೆ ಎಂಟ್ರಿ ಕೊಟ್ಟವರೇ ಖಡಕ್ ಅಧಿಕಾರಿ ಡಿಸಿಪಿ ಗಿರೀಶ್. ಇವರ ಪೊಲೀಸ್ ಬ್ರೈನ್ ಸುಮ್ಮನಿರಲಿಲ್ಲ. ಚಿತ್ರದುರ್ಗದ ರೇಣುಕಾಸ್ವಾಮಿಗೂ ಬೆಂಗಳೂರಿನ ಈ ವ್ಯಕ್ತಿಗಳಿಗೂ ಹಣದ ಸಂಬಂಧ ಹೇಗೆ ಸಾಧ್ಯ..? ಎಂದು ಯೋಚನೆ ಮಾಡುತ್ತಾರೆ. ಈ ಬಗ್ಗೆ ಸಮಗ್ರ ತನಿಖೆ ಮಾಡೋಕೆ ಮುಂದಾಗ್ತಾರೆ. ಆಗಲೇ ಒಂದು ಕೊಲೆಯ ನಿಗೂಢ ರಹಸ್ಯ ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಯಿತು.
ಶರಣಾದವರಿಗೆ ಒಂದು ಸುತ್ತು ಪೊಲೀಸ್ ಭಾಷೆಯಲ್ಲಿ ವಿಭಿನ್ನ ಟ್ರೀಟ್ಮೆಂಟ್ ನಡೆಯುತ್ತೆ. ಈ ವೇಳೆ ಕುಂಡೆ ಉರಿ ತಡೆಯೋಕೆ ಆಗದೆ ಆರೋಪಿಗಳಲ್ಲಿ ಓರ್ವ ಅಕ್ಕನ (ಪವಿತ್ರಾ) ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಅದಕ್ಕೆ ಅಣ್ಣ (ದರ್ಶನ್) ಎತ್ತಾಕ್ಕೊಂಡು ಬಾ ಅಂದ್ರು, ಅದಕ್ಕೆ ಎತ್ತಾಕ್ಕೊಂಡು ಬಂದ್ವಿ’ ಅಂತ ಹೇಳ್ತಾನೆ. ಯಾವ ಅಣ್ಣ ಅದು ಅಂತ ಪೊಲೀಸರು ಎಕ್ಸ್ ಟ್ರಾ ಕ್ಲಾಸ್ ತೆಗೆದುಕೊಂಡು ಕೇಳಿದಾಗ ಕನ್ನಡದ ಚಕ್ರವರ್ತಿ ನಟ ದರ್ಶನ್ ಈ ಕೇಸ್ ನಲ್ಲಿ ಇರೋದು ಖಚಿತವಾಗುತ್ತದೆ.
ಅಲ್ಲಿಂದ ಅಸಲಿ ಆಟ ಶುರುವಾಗುತ್ತೆ ನೋಡಿ. ಗಿರೀಶ್ ಜೊತೆಗೆ ಎಸಿಪಿ ಚಂದನ್ ಕುಮಾರ್ ಕೂಡ ಸೇರಿಕೊಳ್ತಾರೆ, ಇಬ್ಬರು ಸೇರಿ ಈ ಪ್ರಕರಣದ ಮೇಲೆ ಒಂದಷ್ಟು ವರ್ಕೌಟ್ ಮಾಡಿದಾಗ ಮೃ*ತ ರೇಣುಕಾಸ್ವಾಮಿಗೂ ಶರಣಾಗತರಾಗಲು ಬಂದವರಿಗೂ ಯಾವುದೇ ಸಂಬಂಧವಿಲ್ಲ. ಜಸ್ಟ್ ಜೈಲಿಗೆ ಹೋಗೋಕೆ ಹಣ ನೀಡಲಾಗಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ. ಹಣ ಕೊಟ್ಟಿದ್ದು ಯಾರು ಅಂತ ಕೇಳಿದಾಗ ಆರ್ ಆರ್ ನಗರದ ರೆಸ್ಟೋರೆಂಟ್ ಮಾಲೀಕ ವಿನಯ್ ವಿ ಅನ್ನುವ ಹೆಸರು ಕೇಳಿ ಬರುತ್ತೆ. ಆತನನ್ನು ಠಾಣೆಗೆ ತಂದು ಸೊಂಟದ ಕೆಳಗೆ ನಾಲ್ಕು ಬಿಗಿದಾಗ ಹೆಚ್ಚು ಸಮಯ ತೆಗೆದುಕೊಳ್ಳದೆ ಆತ ಸತ್ಯ ಬಾಯಿಬಿಟ್ಟಿದ್ದಾನೆ. ಅಲ್ಲಿಗೆ ಪ್ರಕರಣದ ಸುತ್ತಲಿನ ಒಂದು ಕ್ಲೀಯರ್ ಕಟ್ ಪಿಕ್ಚರ್ ಪೊಲೀಸರಿಗೆ ಸಿಗುತ್ತೆ.
ಅಂದು ಗಿರೀಶ್ ಅವರು ಠಾಣೆಗೆ ಬರದೇ ಇರುತ್ತಿದ್ದರೆ ಅಥವಾ ರಜೆಯಲ್ಲಿ ಇದ್ದಿದ್ದರೆ ಈ ಪ್ರಕರಣ ಖಂಡಿತ ಹಳ್ಳ ಹಿಡಿಯುತ್ತಿತ್ತು. ಹೈಪ್ರೊಫೈಲ್ ವ್ಯಕ್ತಿಯೊಬ್ಬ ಪ್ರಕರಣದ ಒಳಗಡೆ ಇದ್ದಾನೆ ಎಂದ ಮೇಲೆ ಆತನನ್ನು ಹಿಡಿಯಲೇಬೇಕು. ಸಮಾಜಕ್ಕೆ ಮಾದರಿಯಾಗಿರುವ ಇಂತಹ ನೀಚನ ಕೃತ್ಯ ಇಡೀ ಸಮಾಜಕ್ಕೆ ಗೊತ್ತಾಗಬೇಕು. ಇಲ್ಲದಿದ್ದರೆ ಮುಂದೆ ದುಡ್ಡಿನ, ಅಧಿಕಾರದ ಮದದಲ್ಲಿ ಎಲ್ಲರೂ ಕೂಡ ಮುಂದೆ ಕಾನೂನನ್ನು ಕೈಗೆತ್ತಿಕೊಳ್ಳುವವರೇ ಅಂತ ಅಂದುಕೊಂಡವರೇ ತನಿಖೆಗೆ ಮುಂದಾಗುತ್ತಾರೆ. ನೇರವಾಗಿ ದರ್ಶನ್ ಅವರನ್ನು ಬಂಧಿಸೋಕೆ ಎಲ್ಲ ತಯಾರಿ ನಡೆಯುತ್ತೆ.
ದರ್ಶನ್ ಎಲ್ಲಿದ್ದಾರೆ ಮತ್ತು ಅವರ ತಂಡ ಎಲ್ಲೆಲ್ಲಿ ಇದೆ ಅನ್ನುವ ಮಾಹಿತಿಯನ್ನು ಇಂಚಿಚೂ ಪೊಲೀಸರು ಒಂದು ದಿನ ರಾತ್ರಿಯಿಡೀ ಕುಳಿತು ಕಲೆ ಹಾಕುತ್ತಾರೆ. ದರ್ಶನ್ ಮೈಸೂರಿನ ರಾಡಿನ್ ಸನ್ ಬ್ಲೂ ಹೋಟೆಲ್ ನಲ್ಲಿ ತಂಗಿರುವುದು ತಿಳಿಯುತ್ತೆ. ಅಂತೆಯೇ ಪೊಲೀಸರಿಗೆ ಬೆಳ್ ಬೆಳಗ್ಗೆ ಮೈಸೂರಿಗೆ ಹೋಗಿ ಹೋಟೆಲ್ ಎದುರು ನಿಲ್ಲುತ್ತಾರೆ. ದರ್ಶನ್ ಆಗ ತಾನೆ ಜಿಮ್ ಗೆ ಹೋಗಿದ್ದರಿಂದ ಪೊಲೀಸರು ಹೋಟೆಲ್ ಹೊರಗೆ ಕಾಯುತ್ತಾರೆ.
ಜಿಮ್ ಮುಗಿಸಿ ಡಿಫೆಂಡರ್ ಕಾರು ಹತ್ತೋಕೆ ದರ್ಶನ್ ರೆಡಿಯಾಗುತ್ತಿದ್ದಂತೆ ಪೊಲೀಸರು ದರ್ಶನ್ ನನ್ನು ಅರೆಸ್ಟ್ ಮಾಡುತ್ತಾರೆ. ಈ ವೇಳೆ ದರ್ಶನ್ ನಾನು ನನ್ನ ಕಾರಿನಲ್ಲೇ ಠಾಣೆಗೆ ಬರ್ತೆನೆ ಎಂದು ಹೇಳಿದಾಗ ಪೊಲೀಸ್ ಅಧಿಕಾರಿ ‘ನೀವು ನಮ್ಮ ಜೊತೆ ಪೊಲೀಸ್ ಜೀಪ್ ನಲ್ಲಿ ಬರದಿದ್ದರೆ ನನಗೆ ಫೈರ್ ಮಾಡಿ ಕರೆದುಕೊಂಡು ಹೋಗುವ ಅಧಿಕಾರ ಇದೆ’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ ಅನ್ನುವ ಮಾತುಗಳು ಕೂಡ ಕೇಳಿ ಬರ್ತಿವೆ. ಅದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೆಲ್ಲ ಗಿರೀಶ್ ಮತ್ತು ತಂಡದ ಸಾಹಸಕ್ಕೆ ಎರಡು ಗುಂಡಿಗೆ ಇರಬೇಕು ಅಂತ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ.
“ಗಿರೀಶ್ ಮತ್ತು ಚಂದನ್ ಇಬ್ಬರು ಕೂಡ ಪ್ರಾಮಾಣಿಕ ಅಧಿಕಾರಿಗಳು. ಅನೇಕ ಯುವ ಪೊಲೀಸ್ ಅಧಿಕಾರಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದೆ ಕೆಲಸ ನಿರ್ವಹಿಸುವುದರಲ್ಲಿ ಇವರು ನಿಸ್ಸೀಮರು ಎಂದು ಇಲಾಖೆ ಮೂಲಗಳು ಹೇಳುತ್ತವೆ. ಅದರಲ್ಲೂ ಗಿರೀಶ್ ಅವರು 2011ರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸಿದ್ದರು ಅನ್ನುವುದನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕಾಗುತ್ತದೆ.
ಇಂಜಿನಿಯರ್ ಆಗಿದ್ದ ಗಿರೀಶ್ ಅವರು ಬಳಿಕ ಪೊಲೀಸ್ ಅಧಿಕಾರಿಯಾದರು. ಎಸ್ ಗಿರೀಶ್ ಈ ಹಿಂದೆ ಲೋಕಾಯುಕ್ತದಲ್ಲಿದ್ದಾಗ ತಮ್ಮ ನೇರ ಹಾಗೂ ಧೈರ್ಯದ ನಡವಳಿಕೆಗೆ ಹೆಸರಾಗಿದ್ದರು. ಆಗ ದೊಡ್ಡ ದೊಡ್ಡ ಅಧಿಕಾರಿಗಳು, ಕಾರ್ಪೊರೇಟರ್ ಗಳನ್ನು ಕಂಬಿ ಹಿಂದೆ ಹಾಕಿದ ಖ್ಯಾತಿ ಎಸ್ ಗಿರೀಶ್ ಅವರದ್ದು.
ಇನ್ನು, ಚಂದನ್ ಅವರು ಕೂಡ ಮೊದಲು ಸಾಫ್ಟ್ವೇರ್ ಇಂಜಿನಿಯರ್. ಅದಾದ ಬಳಿಕ ಪೊಲೀಸ್ ಅಧಿಕಾರಿಯಾದರು. ಪೊಲೀಸ್ ಇಲಾಖೆಯಲ್ಲಿ ಒಳ್ಳೆ ಹೆಸರಿದೆ. ಕೇಸ್ಗಳನ್ನು ಲಾಜಿಕಲ್ ಎಂಡ್ಗೆ ತೆಗೆದುಕೊಂಡು ಹೋಗುವುದರಲ್ಲಿ ಎತ್ತಿದ ಕೈ ಅಂತ ಅವರ ಇಲಾಖೆ ಹೇಳುತ್ತೆ. ಒಟ್ಟಿನಲ್ಲಿ ಮನಸ್ಸು ಮಾಡಿದರೆ ಪೊಲೀಸರು ಎಂತಹ ಪ್ರಕರಣವನ್ನಾದರೂ ಭೇದಿಸುತ್ತಾರೆ ಅನ್ನೋಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿಯಾಗಿದೆ.